
ಮುರುಡೇಶ್ವರ:
ಕರಾವಳಿ ಭಾಗದಲ್ಲಿ ಉತ್ತಮ ಪರಿಸರ, ಸಮುದ್ರ, ಕೌಶಲ್ಯಯುತ ಮಾನವ ಸಂಪನ್ಮೂಲವಿದ್ದು, ಈ ಭಾಗದ ಜನ ಉದ್ಯೋಗ ಅರಸಿ ಬೇರೆ ಕಡೆ ವಲಸೆ ಹೋಗುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಮುರುಡೇಶ್ವರದಲ್ಲಿ ನಡೆದ ಮೀನುಗಾರರ ದಿನ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಭಾಗವಹಿಸಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
“ಮೀನುಗಾರರು ಸೇರಿದಂತೆ ಕರಾವಳಿ ಭಾಗದ ಎಲ್ಲಾ ವರ್ಗದವರು ಉದ್ಯೋಗ ಹುಡುಕಿಕೊಂಡು ಬೇರೆ ರಾಜ್ಯ ಹಾಗೂ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಇಲ್ಲಿ ಉತ್ತಮ ಆಸ್ತಿ ಹೊಂದಿದ್ದರೂ ಅದನ್ನು ಮಾರಿಕೊಂಡು ಹೋಗುತ್ತಿದ್ದಾರೆ. ಈ ಭಾಗದಲ್ಲಿ ಅತ್ಯುತ್ತಮವಾದ ಸಂಪನ್ಮೂಲಗಳಿವೆ.
ವಲಸೆ ತಪ್ಪಿಸಿ ಈ ಭಾಗದಲ್ಲೇ ಈ ಜನ ಬದುಕು ಕಟ್ಟಿಕೊಳ್ಳುವಂತೆ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಈ ಕಾರ್ಯಕ್ರಮಗಳನ್ನು ಹಂತ ಹಂತವಾಗಿ ಜಾರಿಗೆ ತರುತ್ತಿದ್ದೇವೆ” ಎಂದು ತಿಳಿಸಿದರು.