
ದಾಂಡೇಲಿ :
ಉತ್ತರ ಕನ್ನಡ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ನಾವು ನೀವು ಸಮಾವೇಶವೂ ನಗರದ ಹಾರ್ನಬಿಲ್ ಸಭಾಭವನದಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿತು.
ಕಾರ್ಯಕ್ರಮದಲ್ಲಿ “ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಗೊಂದು ಪರ್ಯಾಯ ಕಣ್ಣೋಟ” ಜನತೆಯ ಕೈಪಿಡಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಶಾಸಕರು ಹಾಗೂ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ.ದೇಶಪಾಂಡೆ ಅವರು ಜಿಲ್ಲೆಯ ಸರ್ವತೋಮುಖ ಪ್ರಗತಿಗಾಗಿ ಶಕ್ತಿಮೀರಿ ಶ್ರಮಿಸಿದ್ದೇನೆ. ವಿಶೇಷವಾಗಿ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನಗಳನ್ನು ತಂದಿದ್ದೆನೆ.ಇಂತಹ ಸಮಾವೇಶಗಳ ಮೂಲಕ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಒಂದು ಸ್ಪಷ್ಟವಾದ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಿದೆ. ಈ ಸಮಾವೇಶದ ಆಶಯದಂತೆ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಈ ಸಮಾವೇಶ ಸ್ಪೂರ್ತಿಯಾಗಲಿ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿಯ ನಿರ್ದೇಶಕರಾದ ಡಾ.ಎಂ.ಚಂದ್ರಪೂಜಾರಿ ಅವರು ಈಗ ನಡೆಯುತ್ತಿರುವ ದರಿದ್ರ ಚುನಾವಣೆಯ ವ್ಯವಸ್ಥೆಯ ಬಗ್ಗೆ ಪ್ರಶ್ನೆ ಮಾಡಬೇಕಾಗಿದೆ ಮತ್ತು ಅದನ್ನು ಸರಿಪಡಿಸಬೇಕಾದ ಅನಿವಾರ್ಯತೆಯಿದೆ. ಇಲ್ಲದೆ ಹೋದರೆ ಅಭಿವೃದ್ಧಿ ಮರೀಚಿಕೆಯಾಗಲಿದೆ ಎಂದರು.
ಸಾಮಾಜಿಕ ಚಿಂತಕರಾದ ಮೀನಾಕ್ಷಿ ಸುಂದರಂ ಅವರು ಮಾತನಾಡಿ ಕೆಲವು ಅಪಾಯಕಾರಿ ಮತ್ತು ಆಕ್ರಮಣಕಾರಿ ನೀತಿಯಿಂದಾಗಿ ಸತತ ನಿರುದ್ಯೋಗದಿಂದ ಹತಾಶೆಗೆ ಒಳಗಾಗುತ್ತಿರುವ ಯುವಜನರ ಪಡೆ ಈ ಜಿಲ್ಲೆಯಲ್ಲಿದೆ. ಅಪೌಷ್ಟಿಕತೆ ಹಾಗೂ ಹಸಿವಿನ ಹೆಚ್ಚಳವಾಗುತ್ತಿದೆ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ದಿಶೆಯಲ್ಲಿ ಜಿಲ್ಲೆಯ ಜನರನ್ನು ಒಂದುಗೂಡಿಸಲು ಈ ಸಮಾವೇಶ ಔಚಿತ್ಯಪೂರ್ಣವಾಗಿದೆ ಎಂದರು.
ಸಮಾವೇಶದ ಸ್ವಾಗತ ಸಮಿತಿ ಅಧ್ಯಕ್ಷರಾದ ಯಮುನಾ ಗಾಂವಕರ ಅವರು ಮಾತನಾಡಿ ದುಡಿಯುವ ಕೈಗಳಿಗೆ ಉದ್ಯೋಗ, ಜಿಲ್ಲೆಯಲ್ಲಿ ರಾಜ್ಯ ಸರ್ಕಾರದ ಬಹುಸುಸಜ್ಜಿತ ಆಸ್ಪತ್ರೆ ಹಾಗೂ ಕೇಂದ್ರ ಸರ್ಕಾರದಿಂದ ಇಎಸ್ಐಸಿ ಉನ್ನತ ಆಸ್ಪತ್ರೆ, ವಿಪತ್ತು ನಿರ್ವಹಣೆ ಮಾಡುವ ಬಹುಸುಸಜ್ಜಿತ ಕೇಂದ್ರದ ಸ್ಥಾಪನೆ, ಪ್ರಯಾಣಿಕರ ಮತ್ತು ಸರಕು ಸಾಗಾಣಿಕೆಗೆ ಅನುಕೂಲಕರವಾಗುವಂತೆ ರೈಲು ಯೋಜನೆ ವ್ಯವಸ್ಥಿತಗೊಳಿಸಲು ಕ್ರಮ ಕೈಗೊಳ್ಳುವುದು, ಲಆ ನಿಟ್ಟಿನಲ್ಲಿ ಈ ಸಮಾವೇಶವನ್ನು ಆಯೋಜಿಸಲಾಗಿದೆ ಎಂದರು.
ಸಭೆಯಲ್ಲಿ ಸ್ಕೋಡವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ವೆಂಕಟೇಶ ನಾಯ್ಕ, ಚಿಂತಕರಾದ ಪಿ.ಆರ್.ಶಾನಭಾಗ, ಸಹಕಾರಿ ಚಿಂತಕರಾದ ಜಾರ್ಜ್ ಫರ್ನಾಂಡೀಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೋಹನ ಹಲವಾಯಿ, ಸಿದ್ದಿ ಬುಡಕಟ್ಟು ಹೋರಾಟಗಾರರಾದ ಬೆನೆತ್ ಸಿದ್ದಿ, ಆದಿವಾಸಿ ಹಕ್ಕುಗಳ ಜಿಲ್ಲಾ ಸಂಚಾಲಕರಾದ ಪ್ರೇಮಾನಂದ ವೆಳಿಪ್, ಕಸಾಪ ಹಳಿಯಾಳ ತಾಲೂಕು ಅಧ್ಯಕ್ಷೆ ಸುಮಂಗಲಾ ಅಂಗಡಿ, ಸಮಾವೇಶದ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ತಿಲಕ್ ಗೌಡ ಅವರು ಜಿಲ್ಲೆಯ ಸರ್ವಂಗೀಣ ಅಭಿವೃದ್ಧಿಗಾಗಿ ಹಲವಾರು ವಿಚಾರಗಳನ್ನು ಪ್ರಸ್ತಾಪಿಸಿ, ಜಿಲ್ಲೆಯ ಸಮಸ್ಯೆಗಳ ಪರಿಹಾರಕ್ಕೆ ಸಂಘಟಿತ ಹೋರಾಟ ಬಹಳ ಮುಖ್ಯವಾಗಿದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಮಾವೇಶದ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾದ ಬಿ.ಎನ್.ವಾಸರೆ ಅವರು ಈ ಸಮಾವೇಶದಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಕ್ರೂಢೀಕರಿಸಿಕೊಂಡು ಹಾಗೂ ಇಂದು ಬಿಡುಗಡೆಗೊಳಿಸಿದ ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಗೊಂದು ಪರ್ಯಾಯ ಕಣ್ಣೋಟ ಜನತೆಯ ಕೈಪಿಡಿಯನ್ನು ಸರಕಾರಕ್ಕೆ ಸಲ್ಲಿಸಲಾಗುತ್ತದೆ. ಜಿಲ್ಲೆಯ ಅವಶ್ಯ ಬೇಡಿಕೆಗಳ ಕುರಿತಂತೆ ಬರಲಿರುವ ಬೆಳಗಾವಿ ಅಧಿವೇಶನದಲ್ಲಿ ಚರ್ಚೆಗೆ ಬಂದು ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಣೆಗೆ ಒತ್ತಾಯಿಸುವ ನಿಟ್ಟಿನಲ್ಲಿಯೂ ಈ ಸಮಾವೇಶದ ಮೂಲಕ ಮುಂದಡಿ ಇಡಲಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಸಮಾವೇಶದ ಖಜಾಂಚಿ ಶಾಂತರಾಮ ನಾಯಕ ಸ್ವಾಗತಿಸಿದರು.ಸಂಘಟನಾ ಕಾರ್ಯದರ್ಶಿ ಸಲೀಂ ಸೈಯದ್ ವಂದಿಸಿದರು. ಸಮಾವೇಶದ ಸ್ವಾಗತ ಸಮಿತಿಯ ಕಾರ್ಯದರ್ಶಿ ರತ್ನ ದೀಪ ಎನ್. ಎಂ ಕಾರ್ಯಕ್ರಮವನ್ನು ನಿರೂಪಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಸಿದ್ಧಿ ಬುಡಕಟ್ಟು ಸಮುದಾಯದವರ ನೃತ್ಯ ಎಲ್ಲರ ಗಮನ ಸೆಳೆಯಿತು.