
ದಾಂಡೇಲಿ:
ಉತ್ತರ ಕನ್ನಡ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ನಾವು ನೀವು ಸಮಾವೇಶವೂ ನಗರದ ಹಾರ್ನಬಿಲ್ ಸಭಾಭವನದಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿತು.
ಸಮಾವೇಶದ ಸ್ವಾಗತ ಸಮಿತಿ ಅಧ್ಯಕ್ಷರಾದ ಯಮುನಾ ಗಾಂವಕರ ಅವರು ಮಾತನಾಡಿ ದುಡಿಯುವ ಕೈಗಳಿಗೆ ಉದ್ಯೋಗ, ಜಿಲ್ಲೆಯಲ್ಲಿ ರಾಜ್ಯ ಸರ್ಕಾರದ ಬಹುಸುಸಜ್ಜಿತ ಆಸ್ಪತ್ರೆ ಹಾಗೂ ಕೇಂದ್ರ ಸರ್ಕಾರದಿಂದ ಇಎಸ್ಐಸಿ ಉನ್ನತ ಆಸ್ಪತ್ರೆ, ವಿಪತ್ತು ನಿರ್ವಹಣೆ ಮಾಡುವ ಬಹುಸುಸಜ್ಜಿತ ಕೇಂದ್ರದ ಸ್ಥಾಪನೆ, ಪ್ರಯಾಣಿಕರ ಮತ್ತು ಸರಕು ಸಾಗಾಣಿಕೆಗೆ ಅನುಕೂಲಕರವಾಗುವಂತೆ ರೈಲು ಯೋಜನೆ ವ್ಯವಸ್ಥಿತಗೊಳಿಸಲು ಕ್ರಮ ಕೈಗೊಳ್ಳುವುದು, ಹುಬ್ಬಳ್ಳಿ -ಅಂಕೋಲಾ ಹಾಗೂ ಜಿಲ್ಲೆಯ ಪ್ರಮುಖ ತಾಲೂಕುಗಳನ್ನು ಸಂಪರ್ಕಿಸುವ ರೈಲು ಮಾರ್ಗಗಳ ನಿರ್ಮಾಣ, ಕೃಷಿ, ಕೈಗಾರಿಕೆ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ, ಶಾಲಾ ಕಾಲೇಜುಗಳಿಗೆ ಸುಸಜ್ಜಿತ ಮೂಲಸೌಕರ್ಯಗಳ ಜೊತೆಗೆ ಸರ್ಕಾರಿ ಶಿಕ್ಷಣ ವ್ಯವಸ್ಥೆ ಬಲಗೊಳಿಸಲು ಜಿಲ್ಲೆಗೆ ಪ್ರತ್ಯೇಕ ಸುಸಜ್ಜಿತ ವಿಶ್ವವಿದ್ಯಾಲಯ ಸ್ಥಾಪನೆ, ಜಿಲ್ಲೆಯಲ್ಲಿ ಹರಿಯುವ ನದಿನೀರಿನ ಸಮರ್ಪಕ ಬಳಕೆಗೆ ಯೋಜನೆ ರೂಪಿಸುವುದು, ಅತಿಕ್ರಮಣ ಭೂಮಿ ಸಕ್ರಮಕ್ಕಾಗಿ ಹಾಗೂ ಕೇಂದ್ರ ಕಾಯ್ದೆಯ ತಿದ್ದುಪಡಿ, ಭೂಮಿ ಹಕ್ಕು, ರಸ್ತೆ, ಕುಡಿಯುವ ನೀರು, ಗುಡ್ಡಗಾಡು ಪ್ರದೇಶಕ್ಕೆ ವಿಶೇಷ ಪ್ಯಾಕೇಜ್ ನೀಡುವುದು, ಪರಿಸರ ಪೂರಕ ಉದ್ಯೋಗಾಧಾರಿತ ಕೈಗಾರಿಕೆಗಳ ಸ್ಥಾಪನೆ, ಕಾಳಿ-ಕೈಗಾ-ನೆವಲ್ ಬೇಸ್-ವನ್ಯಜೀವಿ-ಚತುಷ್ಪಥ ಹೀಗೆ ವಿವಿಧ ಯೋಜನಾ ನಿರಾಶ್ರಿತರಾದ ರೈತರು, ಮೀನುಗಾರರು, ಕಾರ್ಮಿಕರು ಹಾಗೂ ಕೂಲಿಕಾರರಿಗೆ ಪರ್ಯಾಯವಾಗಿ ಭೂಮಿ, ಉದ್ಯೋಗ, ಪರಿಹಾರದ ಬೇಡಿಕೆ ಈಡೇರಿಕೆ, ಆದಿವಾಸಿಗಳಾದ ಕುಣಬಿ, ಹಾಲಕ್ಕಿ, ಗೌಳಿ ಜನಾಂಗವನ್ನು ಸಂವಿಧಾನಬದ್ಧ ಬುಡಕಟ್ಟು ಎಂದು ಪರಿಗಣಿಸುವುದು ಹೀಗೆ ಮೊದಲಾದ ಅತಿ ಅವಶ್ಯ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರದ ಗಮನ ಸೆಳೆಯಲು ಮುಂದಿನ ದಿನಗಳಲ್ಲಿ ಚಳುವಳಿಯ ರೀತಿಯಲ್ಲಿ ಹೋರಾಟವನ್ನು ಹಮ್ಮಿಕೊಳ್ಳಬೇಕಾಗಿದೆ. ಆ ನಿಟ್ಟಿನಲ್ಲಿ ಈ ಸಮಾವೇಶವನ್ನು ಆಯೋಜಿಸಲಾಗಿದೆ ಎಂದರು.