
ದಾಂಡೇಲಿ:
ರೋಗ ಬಂದ ನಂತರ ರೋಗದ ವಿರುದ್ಧ ಹೋರಾಡುವ ಬದಲು ರೋಗ ಬರದಂತೆ ನೋಡಿಕೊಳ್ಳಬೇಕು. ದುಶ್ಚಟಗಳಿಂದ ದೂರವಿದ್ದು ಆರೋಗ್ಯವಂತ ಜೀವನವನ್ನು ಸಾಗಿಸಬೇಕು ಉತ್ತಮ ಆರೋಗ್ಯ ಎಲ್ಲರ ಹಕ್ಕು ಎಂದು ನಗರದ ಜೆಎಮ್ಎಫ್ಸಿ ನ್ಯಾಯಾಲಯದ ನ್ಯಾಯಾಧೀಶೆ ರೋಹಿಣಿ ಬಸಾಪುರ ಹೇಳಿದರು.
ಅವರು ತಾಲ್ಲೂಕು ಕಾನೂನು ಸೇವಾ ಸಮಿತಿ, ಆರೋಗ್ಯ ಇಲಾಖೆ, ತಾಲ್ಲೂಕು ಪಂಚಾಯತಿ ಹಾಗೂ ಹಳೇ ದಾಂಡೇಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಇವುಗಳ ಸಂಯುಕ್ತ ಆಶ್ರಯದಲ್ಲಿ ಸೋಮವಾರ ವಿಶ್ವ ಏಡ್ಸ್ ದಿನಾಚರಣೆ ಮತ್ತು ವಿಶ್ವ ವಿಕಲಚೇತನರ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜಗತ್ತನ್ನು ಕಾಡುತ್ತಿರುವ ಮಾರಕ ರೋಗವಾದ ಏಡ್ಸ್ ಗೆ ನಿರ್ದಿಷ್ಟವಾಗಿ ಯಾವುದೇ ಔಷಧ ಇಲ್ಲ ಮುನ್ನೆಚ್ಚರಿಕೆ ಕ್ರಮಗಳೇ ರೋಗವನ್ನು ನಿಯಂತ್ರಿಸಲು ಇರುವ ಮಾರ್ಗ. ರೋಗದ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು ಜಾಗೃತರಾಗಬೇಕು ಎಂದರು.
ದಾಂಡೇಲಿ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಎಸ್. ಎಚ್ ಕುಲಕರ್ಣಿ ಮಾತನಾಡಿ ಏಡ್ಸ್ ಪೀಡಿತರಿಗೆ ಇರುವ ಕಾನೂನಿನ ರಕ್ಷಣೆ ಹಾಗೂ ಪರಿಹಾರ, ಸಂರಕ್ಷಣೆ ಕುರಿತು ಮಾಹಿತಿ ನೀಡುದರು.
ಹಳಿಯಾಳ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ರೂಪಾ ತುರುಮರಿ ಏಡ್ಸ್ ರೋಗದ ಮೂಲ, ಹರಡುವಿಕೆ, ನಿಯಂತ್ರಣ ಮುನ್ನೆಚ್ಚರಿಕೆ ಹಾಗೂ ಸುರಕ್ಷತಾ ಕ್ರಮ ಹದಿಹರೆಯದವರಿಗೆ ಸುರಕ್ಷಿತ ಲೈಂಗಿಕ ಜ್ಞಾನದ ಇವುಗಳ ಕುರಿತು ವಿಡಿಯೋ ಚಿತ್ರಿಕೆಯ ಮೂಲಕ ವಿಶೇಷ ಉಪನ್ಯಾಸ ನೀಡಿ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ನಾಗರೇಖಾ ಗಾಂವಕರ ವಹಿಸಿದ್ದರು.
ಈ ಸಂದರ್ಭದಲ್ಲಿ ವಕೀಲರಾದ ಎಮ್. ಸಿ. ಹೆಗಡೆ, ಸೋಮಕುಮಾರ.ಎಸ್.,ಗುರುಬಸಯ್ಯ ಮಠಪತಿ, ತಾಲ್ಲೂಕು ವಿಕಲಚೇತನರ ಇಲಾಖೆ ಸಿಬ್ಬಂದಿಗಳಾದ ರಾಮದಾಸ್ ನಾಯ್ಕ, ಅರ್ಜುನ, ರಾಹುಲ್ ಮಡಿವಾಳ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ವಿವಿಧ ಇಲಾಖೆಗಳ ಸಿಬ್ಬಂದಿ ಇದ್ದರು.
ಉಪನ್ಯಾಸಕ ಪ್ರವೀಣ ಸುಲಾಖೆ ಕಾರ್ಯಕ್ರಮವನ್ನು ನಿರೂಪಿಸಿದರು.
ಉಪನ್ಯಾಸಕಿ ಪೂರ್ಣಿಮಾ ಬೆಳವಡಿ ವಂದಿಸಿದರು.