
ಹಳಿಯಾಳ :
ಪರಿಶಿಷ್ಟ ಜಾತಿಗಳು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ನ್ಯಾಯಮೂರ್ತಿ ಎ.ಜೆ ಸದಾಶಿವ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ವಿವಿಧ ದಲಿತಪರ ಸಂಘಟನೆಗಳಿಂದ ಇಂದು ಪ್ರತಿಭಟನೆ ನಡೆಸಲಾಯಿತು.
ನಗರದ ಯಲ್ಲಾಪುರ ನಾಕಾದ ಡಾ. ಬಾಬಾಸಾಹೇಬ ಅಂಬೇಡ್ಕರ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡುವುದರ ಮೂಲಕ ಪ್ರತಿಭಟನಾ ಮೆರವಣಿಗೆಯೂ ಮುಖ್ಯ ರಸ್ತೆ, ಮೇನ್ ಮಾರ್ಕೆಟ್ ರೋಡ್ ಮಾರ್ಗವಾಗಿ ಸ್ಥಳೀಯ ಶಾಸಕರಾದ ಆರ್.ವಿ.ದೇಶಪಾಂಡೆ ಅವರ ನಿವಾಸದ ಮುಂಭಾಗದಲ್ಲಿ ತಮಟೆ ಬಾರಿಸುವುದರ ಮೂಲಕ ಪ್ರತಿಭಟಿಸಿ ನಂತರ ಮಾನ್ಯ ತಹಶೀಲ್ದಾರರ ಮುಖೇನ ಗೌರವಾನ್ವಿತ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಕಳೆದ 30 ವರ್ಷಗಳಿಂದಲೂ ಪರಿಶಿಷ್ಟ ಜಾತಿಯಲ್ಲಿರುವ 101 ಆಯಾ ಜಾತಿಗಳ ಜನಸಂಖ್ಯೆಯ ಆಧಾರದ ಮೇಲೆ ಮೀಸಲಾತಿ ವರ್ಗೀಕರಣ ಆಗಬೇಕೆಂದು ಹೋರಾಟ ನಡೆಸುತ್ತ ಬಂದಿರುತ್ತೇವೆ. ಈ ಹೋರಾಟದ ಉದ್ದೇಶ ಕೇವಲ ಪರಿಶಿಷ್ಟ ಜಾತಿಯಲ್ಲಿರುವ ಬಲ್ಯಾಡ ಜಾತಿಗಳು ಎಂದರೆ ಶೈಕ್ಷಣಿಕ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಬಲಾಡ್ಯ ಇರುವ ಜಾತಿಗಳು ಮಾತ್ರ ಮೀಸಲಾತಿ ಲಾಭವನ್ನು ಪಡೆಯುತ್ತಿದ್ದಾರೆ. ಆದ್ದರಿಂದ ಇತರೆ ಹಿಂದುಳಿದ ಜಾತಿಗಳಿಗೆ ಅನ್ಯಾಯ ಆಗಬಾರದೆಂದು ಪರಿಶಿಷ್ಟ ಜಾತಿಯ ಕಟ್ಟಕಡೆಯ ಶೋಷಿತ ಸಮಾಜಕ್ಕೆ ಮೀಸಲಾತಿಯ ಲಾಭ ಸಿಗಬೇಕೆನ್ನುವ ಉದ್ದೇಶದಿಂದ ನಿರಂತರ ಹೋರಾಟ ನಡೆಸುತ್ತ ಬಂದಿರುತ್ತೇವೆ. ಈ ಹೋರಾಟದ ಫಲವಾಗಿ ಮಾನ್ಯ ಸರ್ವೋಚ್ಚ ನ್ಯಾಯಾಲಯವು ಕಳೆದ ಆಗಸ್ಟ್ 01 ನೇ ತಾರೀಖಿನಂದು 07 ಸದಸ್ಯರ ಪೀಠ ದೇಶದಲ್ಲಿರುವಂತಹ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಒಳ ಮೀಸಲಾತಿಯನ್ನು ಜಾರಿ ಗೊಳಿಸಲು ಆಯಾ ರಾಜ್ಯ ಸರ್ಕಾರಗಳಿಗೆ ಅಧಿಕಾರವನ್ನು ನೀಡಿ ಆದೇಶ ಹೊರಡಿಸಿದೆ.
ಈ ಆದೇಶ ಹೊರಡಿಸಿದ 24 ಗಂಟೆಯೊಳಗೆ ಮೀಸಲಾತಿ ವರ್ಗೀಕರಣ ಅನುಷ್ಠಾನ ಮಾಡುತ್ತೇವೆ ಎಂದು ಹೇಳಿದಂತಹ ಕರ್ನಾಟಕ ರಾಜ್ಯ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ಹೇಳಿ 4 ತಿಂಗಳು ಕಳೆದರೂ ಸಹ ಇನ್ನೂವರೆಗೂ ಯಾವುದೇ ನಿರ್ದಿಷ್ಟ ನಿರ್ಧಾರವನ್ನು ಕೈಗೊಂಡಿದ್ದು ಇರುವುದಿಲ್ಲ. ರಾಜ್ಯ ಸರ್ಕಾರವು ನಾಗ ಮೋಹನ ದಾಸ ಎನ್ನುವ ನಿವೃತ್ತ ನ್ಯಾಯಾಧೀಶರ ಏಕಸದಸ್ಯ ಆಯೋಗ ರಚನೆ ಮಾಡಿ ಆಯೋಗಕ್ಕೆ ಯಾವುದೇ ಅನೂಕೂಲವನ್ನು ಕಲ್ಪಿಸದೇ ಉದ್ದೇಶಪೂರ್ವಕವಾಗಿ ಕಾಲಹಾರಣ ಮಾಡುತ್ತಿದೆ ಎಂದು ಈ ದಿನ ಹಳಿಯಾಳ ತಾಲೂಕಿನ ಸಮಸ್ತ ಮಾದಿಗ, ಚಲವಾದಿ, ಡೋರ, ಚಮಗಾರ, ಸಮಗಾರ ಹಾಗೂ ಹುಲಸ್ವಾರ ಸಮುದಾಯಗಳ ಮುಖಂಡರು ಜಾತಿ ಮೀಸಲಾತಿ ವರ್ಗೀಕರಣವನ್ನು ಶೀಘ್ರದಲ್ಲೇ ಅನುಷ್ಠಾನ ಗೊಳಿಸಬೇಕು ಎಂದು ಈ ಒಂದು ಪ್ರತಿಭಟನೆ ಮೂಲಕ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಹನುಮಂತ ಚಿನಗಿನಕೊಪ್ಪ, ಯಲ್ಲಪ್ಪ ಹೊನ್ನೋಜಿ, ಹನುಮಂತ ಚಲವಾದಿ, ರಾಜು ಮೇತ್ರಿ, ವಿಲಾಸ ಕಣಗಲಿ, ಹನುಮಂತ ಮೇತ್ರಿ, ಪೋಮಣ್ಣಾ ದಾನಪ್ಪನವರ, ಆನಂದ ಮೇತ್ರಿ, ಎಚ್.ಬಿ.ಪರಶುರಾಮ, ಬಸವರಾಜ ಮೇತ್ರಿ, ಜ್ಞಾನೇಶ್ವರ ಗಜಾಕೋಶ, ಕಲ್ಲಪ್ಪ ಖಾದ್ರೋಳ್ಳಿ, ಗುರುನಾಥ ಮೇತ್ರಿ, ಪಾಂಡು ಚಲವಾದಿ, ಬಸವರಾಜ ನಾಗಪ್ಪ ಮೇತ್ರಿ, ದ್ಯಾಮಣ್ಣಾ ಮೇತ್ರಿ ಹಾಗೂ ಮೊದಲಾದವರು ಉಪಸ್ಥಿತರಿದ್ದರು.