
ದಾಂಡೇಲಿ:
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವೃಕ್ಷ ಮಾತೆ ತುಳಸಿ ಗೌಡ ಅವರು ನಮ್ಮನಗಲಿರುವುದು ಅತ್ಯಂತ ನೋವಿನ ಸಂಗತಿಯಾಗಿ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿಎನ್. ವಾಸರೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಅಂಕೋಲೆಯ ಪುಟ್ಟ ಗ್ರಾಮದಿಂದ ಬಂದ ತುಳಸಿ ಗೌಡರವರು ಒಂದು ರೀತಿಯಲ್ಲಿ ಹಸಿರು ಕ್ರಾಂತಿಯನ್ನೇ ಮಾಡಿದವರು. ಗಿಡಗಳ ಮೇಲೆ ಮಕ್ಕಳಿಗಿಂತ ಹೆಚ್ಚಿನ ಪ್ರೀತಿಯನ್ನು ಇಟ್ಟುಕೊಂಡು ಪೋಷಿಸಿ ಬೆಳೆಸಿದವರು. ತಮ್ಮ ಪ್ರತಿ ಮಾತಿನಲ್ಲಿಯೂ ಕೂಡ ‘ಗಿಡಗಳನ್ನು ಬೆಳೆಸಿ, ಮರಗಳನ್ನ ಉಳಿಸಿ’ ಎಂದು ಉಚ್ಚರಿಸುತ್ತಿದ್ದವರು. ಅವರ ಪರಿಸರದ ಪ್ರೀತಿ ಅನನ್ಯವಾದುದು.
ದೇಶದ ಅತ್ಯುನ್ನತ ಪ್ರಶಸ್ತಿಯಾಗಿರುವ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ತುಳಸಿ ಗೌಡರವರು ಈ ಜಿಲ್ಲೆಯ ಹೆಮ್ಮೆಯಾಗಿದ್ದರು. ಅವರ ಅಗಲುವಿಕೆ ಉತ್ತರ ಕನ್ನಡದ ಸಾಂಸ್ಕೃತಿಕ ಹಾಗು ಸಾಮಾಜಿಕ ಕ್ಷೇತ್ರಕ್ಕೆ ಅದರಲ್ಲೂ ಪರಿಸರದ ಕ್ಷೇತ್ರಕ್ಕೆ ತುಂಬಲಾರದಷ್ಟು ಹಾನಿಯನ್ನುಂಟು ಮಾಡಿದೆ.
ಅವರ ನೆಲ ಮೂಲ ಸಂಸ್ಕೃತಿಯನ್ನು, ಅವರ ಪರಿಸರದ ಕಾಳಜಿಯನ್ನ ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದಿರುವ ಬಿ.ಎನ್. ವಾಸರೆಯವರು ತಾನು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷನಾಗಿ ಆಯ್ಕೆಯಾದ ಸಂದರ್ಭದಲ್ಲಿ ಹೊಣೆಗಾರಿಕೆ ಸ್ವೀಕರಿಸುವ ಸಂದರ್ಭದಲ್ಲಿ ತುಳಸಿ ಗೌಡ ಅವರನ್ನು ಗೌರವ ಉಪಸ್ಥಿತರನ್ನಾಗಿ ಕರೆದು, ಅವರನ್ನು ಸನ್ಮಾನಿಸಿ ಗೌರವಿಸಿದ್ದನ್ನ ನೆನಪಿಸಿಕೊಂಡಿದ್ದಾರೆ. ಜೊತೆಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಈ ಹಿರಿಯ ಚೇತನದ ಅಗಲವಿಕೆಗೆ ಸಂತಾಪ ಸೂಚಿಸುತ್ತದೆ. ಮುಂಬರುವ ದಿನಗಳಲ್ಲಿ ತುಳಸಿ ಗೌಡ ಅವರ ಸ್ಮರಣೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಒಂದು ಕಾರ್ಯಕ್ರಮ ಆಯೋಜಿಸಲಿದೆ ಎಂಬುದನ್ನು ಕೂಡ ತಿಳಿಸಿದ್ದಾರೆ.