
ದಾಂಡೇಲಿ
ಬರುವ ಬುಧವಾರ ಡಿಸೆಂಬರ್ 21 ರಂದು ದಾಂಡೇಲಿಯಲ್ಲಿ ಜಿಲ್ಲಾ ಮಟ್ಟದ ಫೈಜಾನೆ ಇ ಮದಿನಾ ಸಮಾವೇಶ ನಡೆಯಲಿದೆ ಎಂದು ನೂರದ ಇಸ್ಲಾಂ ಟ್ರಸ್ಟ್ ಅಧ್ಯಕ್ಷ ಹಾಗು ಅಂಜುಮನ್ ಸಂಸ್ಥೆಯ ಕಾರ್ಯದರ್ಶಿ ಇಕ್ಬಾಲ್ ಶೇಖ್ ಹೇಳಿದರು.
ಬುಧವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಉತ್ತರ ಪ್ರದೇಶ ರಾಜ್ಯದ ಅಶ್ರಫಿ ಅಲ್-ಜೀಲಾನಿ ಖೀಚೊಚಾ ಸಂಸ್ಥೆಯ ಮುಖ್ಯಸ್ಥರಾದ ಸಯದ್ ಜಾಮಿ ಆಶ್ರಫ್ ಅವರು ಉದ್ಘಾಟಕರಾಗಿ ಪಾಲ್ಗೊಂಡರೆ, ವಿಶೇಷ ಅತಿಥಿಗಳಾಗಿ ಯು.ಪಿ ರಾಜ್ಯದ ಸಾಹೇಬ್ ಕೀಬ್ಲಾ ಸಂಸ್ಥೆಯ ಮುಖ್ಯಸ್ಥರಾದ ಗುಲಾಮ್ ರಬ್ಬಾನಿ ನಷ್ಟಾರ್ ಮತ್ತು ಬೆಂಗಳೂರು ಘಟಕದ ಸಾಹೇಬ್ ಕೀಬ್ಲಾ ಸಂಸ್ಥೆಯ ಅಧ್ಯಕ್ಷ ಮುಫ್ತಿ ನಾಸಿರ್ ರಜಾ ಖಾನ್ ಅವರು ಭಾಗವಹಿಸಲಿದ್ದಾರೆ. ಹಾಗೆ ಗೌರವ ಅತಿಥಿಗಳಾಗಿ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ. ದೇಶಪಾಂಡೆರವರು ಭಾಗವಹಿಸಲಿದ್ದಾರೆ. ಇನ್ನೂ ಅತಿಥಿಗಳಾಗಿ ಶಿಗ್ಗಾಂವಿಯ ಮಾಜಿ ಶಾಸಕ ಮತ್ತು ಹೆಸ್ಕಾಂ ಚೇರಮನ್ ಸಯದ್ ಅಜೀಂಪೀರ್ ಖಾದ್ರಿ ಮತ್ತು ವಕ್ಫ಼್ ಬೋರ್ಡ್ ಚುನಾಯಿತ ಸದಸ್ಯ ಅನ್ವರ್ ಪಾಷಾ ಹಾಗು ರಾಜ್ಯ ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿಯ ನಿರ್ದೇಶಕ ಮೊಹಮದ್ ರಾಶಿದ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದ ಇಕ್ಬಾಲ್ ಶೇಖ್ ಅವರು, ಮುಸ್ಲಿಂ ಅಲ್ಪಸಂಖ್ಯಾತರ ಈ ಸಮಾವೇಶದಲ್ಲಿ 10 ಸಾವಿರಕ್ಕೂ ಹೆಚ್ಚು ಜನರು ಸೇರಲಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ದಾಂಡೇಲಿ ಸುತ್ತಮುತ್ತಲಿನ ಸಾಹಿತಿಗಳನ್ನು ಸನ್ಮಾನಿಸಲಾಗುತ್ತದೆ. ಶಾಂತಿ ಸೌಹಾರ್ದತೆಯಿಂದ ನಡೆಯಲಿರುವ ಈ ಸಮಾವೇಶದಲ್ಲಿ ದಾಂಡೇಲಿಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳಬೇಕೆಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಗೌಸ್ ಖತೀಬ್ ಅಧ್ಯಕ್ಷ ನವಾಜ್ ಕರೀಂ ಖಾನ್, ನಗರಸಭೆ ಅಧ್ಯಕ್ಷ ಅಶ್ಚಾಕ್ ಶೇಖ್, ನಗರಸಭಾ ಸದಸ್ಯರುಗಳಾದ ಮಜಿದ್ ಸನದಿ, ಮೌಲಾಲಿ ಮುಲ್ಲಾ, ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ದಾದಾಪೀರ್ ಮುಲ್ಲಾ ಸೇರಿದಂತೆ ಅನೇಕರು ಇದ್ದರು.