
ಯಲ್ಲಾಪುರ:
ಬೈಕ್ನಲ್ಲಿ ತೆರಳುತ್ತಿದ್ದ ಗ್ರಾಮ ಪಂಚಾಯತ್ ಸದಸ್ಯನ ಮೇಲೆ ಕರಡಿಗಳು ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ತಾಲ್ಲೂಕಿನ ಉಪಳೇಶ್ವರದ ಹುಟ್ಕಂಡ ಎಂಬಲ್ಲಿ ನಡೆದಿದೆ. ಆರ್.ಎಸ್.ಭಟ್ ಕರಡಿ ದಾಳಿಯಿಂದ ಗಾಯಗೊಂಡ ಸದಸ್ಯನಾಗಿದ್ದಾರೆ.
ಚಂದ್ಗುಳಿ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷರಾಗಿರುವ ಆರ್.ಎಸ್ ಭಟ್, ಬೆಳಿಗ್ಗೆ 7 ಗಂಟೆ ಸುಮಾರಿಗೆ ಕೆಲಸದ ನಿಮಿತ್ತ ಬೈಕಿನ ಮೇಲೆ ತೆರಳುತ್ತಿದ್ದ ವೇಳೆ ಕರಡಿಗಳು ಪ್ರತ್ಯಕ್ಷವಾಗಿದ್ದು, ಕೂಡಲೇ ಬೈಕನ್ನು ವೇಗವಾಗಿ ಚಲಾಯಿಸಿಕೊಂಡು ಹೋಗಲು ಯತ್ನಿಸಿದರಾದರೂ ಸಾಧ್ಯವಾಗದೇ ಕರಡಿಗಳ ಕೈಗೆ ಸಿಲುಕಿದ್ದಾರೆ. ಪರಿಣಾಮ ಕರಡಿಗಳು ಕೈ, ಕಾಲು, ಮುಖದ ಭಾಗದಲ್ಲಿ ಪರಚಿ ಗಾಯಗೊಳಿಸಿವೆ.
ನೆಲಕ್ಕೆ ಬಿದ್ದಿದ್ದ ಅವರು ಹರಸಾಹಸಪಟ್ಟು ಎದ್ದು, ಬೈಕಿನ ಮೇಲೆ ಮನೆಗೆ ತೆರಳಿದ್ದು, ಬಳಿಕ ಕುಟುಂಬಸ್ಥರು ಸೇರಿ ಯಲ್ಲಾಪುರ ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಗಂಭೀರ ಗಾಯಗೊಂಡಿದ್ದ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಆಸ್ಪತ್ರೆಗೆ ರವಾನಿಸಲಾಗಿದೆ.