
ದಾಂಡೇಲಿ: ಪೊಲೀಸ್ ಇಲಾಖೆ, ಜನತಾ ವಿದ್ಯಾಲಯ ಶಿಕ್ಷಣ ಸಂಸ್ಥೆ ಮತ್ತು ಧಾರವಾಡದ ಪ್ರೆಸ್ಟೀಜ್ ಶಿಕ್ಷಣ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ರಸ್ತೆ ಸುರಕ್ಷತಾ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಡಿವೈಎಸ್ಪಿ ಶಿವಾನಂದ ಮದರಖಂಡಿ ಅವರು ನಗರದ ಜನತಾ ವಿದ್ಯಾಲಯದ ಪ್ರವೇಶದ್ವಾರದಲ್ಲಿ ಇಂದು ಮಧ್ಯಾಹ್ನ ಚಾಲನೆಯನ್ನು ನೀಡಿದರು.
ಜಾಥಾಗೆ ಚಾಲನೆ ನೀಡಿ ಮಾತನಾಡಿದ ಅವರು ಸವಾರರು ರಸ್ತೆ ಸುರಕ್ಷತೆಯನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಈಗಾಗಲೇ ರಸ್ತೆ ಸುರಕ್ಷತೆಯ ಬಗ್ಗೆ ಹಾಗೂ ವಾಹನ ಸವಾರರ ಹಿತದೃಷ್ಟಿಯಿಂದ ಹತ್ತು ಹಲವಾರು ಜಾಗೃತಿ ಶಿಬಿರ ಮಾಡಿದರೂ ಅದು ಕೇವಲ ಜಾಗೃತಿಗೆ ಸೀಮಿತವಾಗುತ್ತಿರುವುದು ಬೇಸರದ ಸಂಗತಿ. ನಿಷೇದಿತ ಸ್ಥಳಗಳಲ್ಲಿ ವಾಹನ ನಿಲುಗಡೆ, ೧೮ ವರ್ಷದೊಳಗೆ ಇರುವ ಮಕ್ಕಳಿಗೆ ವಾಹನ ನೀಡುವುದು, ಹೆಲ್ಮೆಟ್ ಇಲ್ಲದೆ ವಾಹನದಲ್ಲಿ ಸಂಚರಿಸುವುದು, ಸರಿಯಾದ ದಾಖಲಾತಿ ಇಲ್ಲದೆ ವಾಹನ ಚಲಾಯಿಸುವುದು ಅಪರಾಧವಾಗಿದೆ. ಇಂತಹ ಅಪರಾಧಗಳಿಗೆ ದಂಡ ಹಾಗೂ ಕಾನೂನು ಚೌಕಟ್ಟಿನಲ್ಲಿ ಶಿಕ್ಷೆಗೆ ಒಳಪಡುವುದರಿಂದ ಕಡ್ಡಾಯವಾಗಿ ಎಲ್ಲರೂ ಕಾನೂನಿನ ಸುತ್ತೋಲೆಗಳನ್ನು ಪಾಲನೆ ಮಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರ ಠಾಣೆಯ ಪಿಎಸ್ಐ ಕಿರಣ್ ಪಾಟೀಲ್, ಜನತಾ ವಿದ್ಯಾಲಯ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿ ರೀಟಾ ಡಯಾಸ್, ಜನತಾ ವಿದ್ಯಾಲಯ ಪಿಯು ಕಾಲೇಜಿನ ಪ್ರಾಚಾರ್ಯರಾದ ಅಮೃತ್ ರಾಮರಥ, ಧಾರವಾಡದ ಪ್ರೆಸ್ಟಿಜ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ರಾಘವೇಂದ್ರ ಎಂ.ಆನೆಗುಂದಿ ಮತ್ತು ಸೇಫ್ಟಿ ಮ್ಯಾನೇಜ್ಮೆಂಟ್ ವಿಭಾಗದ ಮುಖ್ಯಸ್ಥರಾದ ರುಬಿಯಾ ಮಕಾಂದಾರ, ಜನತಾ ವಿದ್ಯಾಲಯ ಪ್ರೌಢಶಾಲೆಯ ಶಿಕ್ಷಕರು, ಜನತಾ ವಿದ್ಯಾಲಯ ಪ್ರೌಢಶಾಲೆಯ ಹಾಗೂ ವಿದ್ಯಾರ್ಥಿಗಳು ಮತ್ತು ನಗರ ಠಾಣೆಯ ಪೊಲೀಸರು ಉಪಸ್ಥಿತರಿದ್ದು ಜಾಥಾದಲ್ಲಿ ಭಾಗವಹಿಸಿದರು.