
ಕಾರವಾರ: ನಗರದ ಬಾಲಕಿಯರ ಬಾಲಮಂದಿರದಲ್ಲಿ ವಿದ್ಯಾರ್ಥಿನಿ ಶ್ವೇತಾ ಫಣಿಕ್ಕರ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿ ಸೋಮವಾರ ತಾಲೂಕು ಭಂಡಾರಿ ಸಮಾಜೋನ್ನತಿ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರಿಗೆ ಮನವಿ ಸಲ್ಲಿಸಿದರು.
ಈಚೆಗೆ ಇಲ್ಲಿನ ಕೋಡಿಬಾಗ ಮೂಲದ ಎಸ್ಸೆಸೆಲ್ಸಿ ವಿದ್ಯಾರ್ಥಿನಿ ಶ್ವೇತಾ ಫಣಿಕ್ಕರ (16) ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಬಾಲಕಿಯರ ಬಾಲಮಂದಿರದಲ್ಲಿ ಆತ್ನಹತ್ಯೆ ಮಾಡಿಕೊಂಡಿದ್ದಾಳೆ. ಬಡ ಕುಟುಂಬದ ಮೂಲದಿಂದ ಬಂದಿದ್ದ ವಿದ್ಯಾರ್ಥಿನಿಯನ್ನು ಆಕೆಯ ತಾಯಿ ಬಾಲಕಿಯರ ಬಾಲಮಂದಿರದಲ್ಲಿ ಇರಿಸಿ ವಿದ್ಯಾಭ್ಯಾಸ ಮಾಡಿಸುತ್ತಿದ್ದರು. ಅವಳ ಆತ್ಮಹತ್ಯೆಗೆ ಬಾಲಮಂದಿರದ ವಾರ್ಡನ್ ಹಾಗೂ ಸಿಬ್ಬಂದಿಯೇ ಕಾರಣರಾಗಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ.
ಘಟನೆಯ ಕುರಿತು ಈಗಾಗಲೇ ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ. ಆದರೆ ಈವರೆಗೆ ಯಾವುದೇ ಸಿಬ್ಬಂದಿ ವಿರುದ್ಧವೂ ಪೊಲೀಸರು ಕ್ರಮ ಕೈಗೊಂಡಿಲ್ಲ. ಹೀಗಾಗಿ ಸೂಕ್ತ ತನಿಖೆ ನಡೆಸಿ ಮೃತ ವಿದ್ಯಾರ್ಥಿನಿ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.