
ದಾಂಡೇಲಿ : ನಗರಸಭೆಯಲ್ಲಿ ನಗರ ಸಭೆಯ ಅಧ್ಯಕ್ಷ ಅಷ್ಪಾಕ್ ಶೇಖ ಅಧ್ಯಕ್ಷತೆಯಲ್ಲಿ ಬಜೆಟ್ ಮಂಡನಾ ಸಭೆಯು ಸೋಮವಾರ ಜರುಗಿತು.
ನಗರ ಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಧಾ ರಾಮಲಿಂಗ ಜಾಧವ ಅವರು 2025-26ನೇ ಸಾಲಿನ ವಾರ್ಷಿಕ ಬಜೆಟ್ ಮಂಡನೆ ಮಾಡಿದರು. ಒಟ್ಟು ರೂ: 54,42,57,258/- ರೂ ಜಮಾವನ್ನು ಹೊಂದಿರುವ ಬಜೆಟಿನಲ್ಲಿ ರೂ: 54,24,21,603/- ಖರ್ಚನ್ನು ತೋರಿಸಲಾಗಿದೆ. ಒಟ್ಟು ಅಂದಾಜು ರೂ: 18,35,655/- ಉಳಿತಾಯವಾಗಲಿರುವುದನ್ನು ಬಜೆಟಿನಲ್ಲಿ ತಿಳಿಸಲಾಗಿದೆ.
ಶಾಸಕರ ವಿಶೇಷ ಅನುದಾನದಡಿಯಲ್ಲಿ ದಾಂಡೇಲಿ ನಗರದ ಮುಖ್ಯ ರಸ್ತೆಗಳಿಗೆ ಬೀದಿ ದೀಪಗಳ ಅಳವಡಿಕೆ, ನಗರದ 24 ಟೆನಾಮೆಂಟ್ ಕಟ್ಟಡವನ್ನು ತೆರವುಗೊಳಿಸಿ ಹೊಸದಾಗಿ ವಾಣಿಜ್ಯ ಮಳಿಗೆ ಹಾಗೂ ವಸತಿ ಗೃಹಗಳನ್ನು ನಿರ್ಮಿಸುವುದು, ನಂದಗೋಕುಲ ಉದ್ಯಾನವನದ ಹತ್ತಿರ ಹೈಟೆಕ್ ವಾಣಿಜ್ಯ ಸಂಕೀರ್ಣ ಮಳಿಗೆಗಳನ್ನು ನಿರ್ಮಿಸುವುದು ಮತ್ತು ನಗರದ ಪಟೇಲ್ ವೃತ್ತದಿಂದ ಎಲ್ಐಸಿ ಕಚೇರಿವರೆಗೆ ಪಾರ್ಕಿಂಗ್ ಸೌಲಭ್ಯವನ್ನು ಕಲ್ಪಿಸುವುದನ್ನು ಬಜೆಟಿನಲ್ಲಿ ವಿವರಿಸಲಾಗಿದೆ.
ದಾಂಡೇಲಿಯಿಂದ ಹಳಿಯಾಳ, ಅಳ್ನಾವರಕೆ ನೀರು ಕೊಂಡ್ಯೂಯ್ಯುವ ಪೈಪ್ ಲೈನ್ ದಾಂಡೇಲಿಯಿಂದ ಹಳಿಯಾಳ ರಸ್ತೆ ಬದಿಯಲ್ಲಿ ಕೊಂಡೊಯ್ಯಬೇಕೆ ಹೊರತು, ಕಾಗದ ಕಾರ್ಖಾನೆಯ ಒಳಗಡೆಯಿಂದ ಕೊಂಡೊಯ್ಯುವ ಹುನ್ನಾರ ನಡೆಯುತ್ತಿದ್ದು, ಇದು ಹತ್ತು ಹಲವು ಅನುಮಾನಕ್ಕೆ ಕಾರಣವಾಗುತ್ತಿದೆ. ಆದ್ದರಿಂದ ದಾಂಡೇಲಿ ನಗರದಿಂದ ಹಳಿಯಾಳ ರಸ್ತೆ ಬದಿಯಲ್ಲಿ ಈ ಪೈಪ್ ಲೈನ್ ಹಾದು ಹೋಗಲು ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಸದಸ್ಯ ನರೇಂದ್ರ ಚೌಹ್ವಾಣ್ ಮತ್ತು ದಶರಥ ಬಂಡಿವಡ್ಡರ ಅವರು ಆಗ್ರಹಿಸಿದರು.
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಈವರೆಗೆ ಲ್ಯಾಪ್ ಟಾಪ್, ಟ್ಯಾಬ್ ಕೊಡದೇ ಇರುವುದರ ಬಗ್ಗೆ ಸಭೆಯಲ್ಲಿ ಸದಸ್ಯರಾದ ದಶರಥ ಬಂಡಿವಡ್ಡರ, ಅನಿಲ್ ನಾಯ್ಕರ ಅವರು ಪ್ರಶ್ನಿಸಿದರು.
ಸಭೆಯಲ್ಲಿ ಪೌರಾಯುಕ್ತರಾದ ವಿವೇಕ ಬನ್ನೆ ಹಾಗೂ ನಗರ ಸಭಾ ಸದಸ್ಯರುಗಳು, ನಗರ ಸಭೆಯ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.