
ಕಾರವಾರ:
ಇಲ್ಲಿನ ಸುಭಾಷ್ ವೃತ್ತದಲ್ಲಿ ಸ್ಕೂಟಿಯೊಂದಕ್ಕೆ ಡಿಕ್ಕಿ ಹೊಡೆದ ಕಾರು ನಿಲ್ಲಿಸೇ ವೇಗವಾಗಿ ಪರಾರಿಯಾಗಿದ್ದು ಕ್ಷಣ ಮಾತ್ರದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸುಭಾಷ್ ವೃತ್ತದಲ್ಲಿ ಮಹಾಗಣಪತಿ ದೇವಸ್ಥಾನದ ಕಡೆಯಿಂದ ಬಸ್ ನಿಲ್ದಾಣದ ಕಡೆಗೆ ಸ್ಕೂಟಿಗೆ ಹಿಂದಿನಿಂದ ಬಂದ KA30 N3498 ನೊಂದಣಿಯ ಕಾರು ಡಿಕ್ಕಿ ಹೊಡೆದಿದೆ. ಘಟನೆಯಿಂದ ಸ್ಕೂಟಿ ನೆಲಕ್ಕೆ ಬಿದ್ದಿದ್ದು ಸ್ಕೂಟಿಯ ಹಿಂಬದಿ ಕುಳಿತಿದ್ದ ವೃದ್ಧೆಯ ಕೈ ಹಾಗೂ ಕಾಲುಗಳಿಗೆ ಗಾಯವಾಗಿದೆ. ಆದರೆ ಕಾರಿನ ಚಾಲಕ ನಿಲ್ಲಿಸದೇ ಪರಾರಿಯಾಗಿದ್ದಾನೆ. ತಕ್ಷಣ ಸ್ಥಳದಲ್ಲಿದ್ದ ಸಂಚಾರಿ ಪೊಲೀಸ್ ಪೇದೆ ಪ್ರಕಾಶ ವಡ್ಡರ ವಾಕಿಟಾಕಿ ಮೂಲಕ ಸಂದೇಶ ನೀಡಿದ್ದು ಕ್ಷಣಮಾತ್ರದಲ್ಲಿ ಆರ್ಟಿಒ ಕಚೇರಿಯ ಬಳಿ ಕಾರನ್ನು ಕರ್ತವ್ಯದಲ್ಲಿದ್ದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಥಳೀಯರು ಹಾಗೂ ಪೊಲೀಸರ ಸಹಾಯದಿಂದ ವೃದ್ಧೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.