
ಕ್ರೀಡೆಯ ಜೊತೆಗೆ ವ್ಯಕ್ತಿತ್ವ ವಿಕಸನಕ್ಕೂ ಕ್ರೀಡಾ ತರಬೇತಿ ಸಹಕಾರಿ : ರಾಜ್ಯ ಕ್ರಿಕೆಟ್ ತರಬೇತಿದಾರ ಶಿವಾಜಿ ವಡ್ಡರ್
ದಾಂಡೇಲಿ : ಮಕ್ಕಳ ಕ್ರೀಡಾ ಭವಿಷ್ಯಕ್ಕೆ ನಿರ್ಮಾಣಕ್ಕೆ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಕ್ರೀಡಾ ತರಬೇತಿ ಸಹಕಾರಿಯಾಗಿದೆ ಎಂದು ರಾಜ್ಯ ಕ್ರಿಕೆಟ್ ತರಬೇತಿದಾರರಾದ ಶಿವಾಜಿ ವಡ್ಡರ್ ಅವರು ಹೇಳಿದರು.
ಅವರು ನಗರದ ಬಂಗೂರುನಗರ ಪದವಿ ಮಹಾವಿದ್ಯಾಲಯದ ಸಭಾಭವನದಲ್ಲಿ ದಾಂಡೇಲಿ ಕ್ರಿಕೆಟ್ ಅಕಾಡೆಮಿಯನ್ನು ಉದ್ಘಾಟಿಸಿ, ಸಮ್ಮರ್ ಲೆದರ್ ಬಾಲ್ ಕ್ರಿಕೆಟ್ ಕೋಚಿಂಗ್ ಶಿಬಿರಕ್ಕೆ ಚಾಲನೆಯನ್ನು ನೀಡಿ ಮಾತನಾಡುತ್ತಿದ್ದರು. ಆಸಕ್ತಿ ಮತ್ತು ಪರಿಶ್ರಮ ಇದಲ್ಲಿ ಯಶಸ್ಸು ಸಾಧ್ಯ. ಈ ಭಾಗದ ಮಕ್ಕಳನ್ನು ಅತ್ಯುತ್ತಮ ಕ್ರಿಕೆಟರನ್ನಾಗಿ ರೂಪಿಸುವ ಮಹತ್ವಕಾಂಕ್ಷಿ ಉದ್ದೇಶದೊಂದಿಗೆ ದಾಂಡೇಲಿ ಕ್ರಿಕೆಟ್ ಅಕಾಡೆಮಿ ಜನ್ಮ ತಾಳಿರುವುದು ಈ ಭಾಗದ ಮಕ್ಕಳ ಸೌಭಾಗ್ಯ. ಒಳ್ಳೆಯ ಉದ್ದೇಶವನ್ನು ಇಟ್ಟುಕೊಂಡು ರಚನೆಯಾಗಿರುವ ಈ ಕ್ರಿಕೆಟ್ ಅಕಾಡೆಮಿ ಭವಿಷ್ಯದಲ್ಲಿ ಕ್ರೀಡಾ ಕ್ಷೇತ್ರಕ್ಕೆ ಮಹತ್ವದ ಶಕ್ತಿಯಾಗಲಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ನಗರಸಭೆಯ ಅಧ್ಯಕ್ಷ ಅಷ್ಪಾಕ್ ಶೇಖ ಅವರು ಲೆದರ್ ಬಾಲ್ ಕ್ರಿಕೆಟ್ ತರಬೇತಿ ಶಿಬಿರವನ್ನು ಆಯೋಜಿಸಿರುವುದು ಅತ್ಯುತ್ತಮವಾದ ಬೆಳವಣಿಗೆ. ಸಮಸ್ತ ನಗರದ ಜನತೆಯ ಪರವಾಗಿ ದಾಂಡೇಲಿ ಕ್ರಿಕೆಟ್ ಅಕಾಡೆಮಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ ಎಂದರು.
ಮುಖ್ಯ ಅತಿಥಿಗಳಾಗಿ ಕಸಾಪ ಜಿಲ್ಲಾಧ್ಯಕ್ಷರಾದ ಬಿ.ಎನ್.ವಾಸರೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೋಹನ ಹಲವಾಯಿ, ನಗರಸಭೆಯ ಸದಸ್ಯರಾದ ಸಂಜಯ ನಂದ್ಯಾಳ್ಕರ, ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಘವೇಂದ್ರ ಜೆ.ಆರ್, ಬಂಗೂರನಗರ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಬಿ.ಎಲ್.ಗುಂಡೂರ, ಪಿಎಸ್ಐಗಳಾದ ಅಮೀನ್ ಅತ್ತಾರ ಮತ್ತು ಕಿರಣ್ ಪಾಟೀಲ್ ಭಾಗವಹಿಸಿ ಶುಭ ಕೋರಿದರು.
ವೇದಿಕೆಯಲ್ಲಿ ದಾಂಡೇಲಿ ಕ್ರಿಕೆಟ್ ಅಕಾಡೆಮಿಯ ಅಧ್ಯಕ್ಷರಾದ ಅನಿಲ್ ಪಾಟ್ನೇಕರ್, ಉಪಾಧ್ಯಕ್ಷರಾದ ರಾಜೇಶ ತಿವಾರಿ ಉಪಸ್ಥಿತರಿದ್ದರು. ಲೆದರ್ ಬಾಲ್ ಕ್ರಿಕೆಟ್ ಕೋಚಿಂಗ್ ಶಿಬಿರದಲ್ಲಿ ಒಟ್ಟು ೧೪೦ ಬಾಲಕ, ಬಾಲಕಿಯರು ಭಾಗವಹಿಸಿದ್ದಾರೆ.
ದಾಂಡೇಲಿ ಕ್ರಿಕೆಟ್ ಅಕಾಡೆಮಿಯ ಅಧ್ಯಕ್ಷರಾದ ಅನಿಲ್ ಪಾಟ್ನೇಕರ್ ಸ್ವಾಗತಿಸಿದರು. ಕೋಶಾಧಿಕಾರಿ ಸಚಿನ್ ಕಾಮತ್ ಅತಿಥಿಗಳನ್ನು ಪರಿಚಯಿಸಿದರು. ಸಹ ಕಾರ್ಯದರ್ಶಿ ಇಮಾಮ್ ಸರ್ವರ್ ಅವರು ದಾಂಡೇಲಿ ಕ್ರಿಕೆಟ್ ಅಕಾಡೆಮಿಯ ಉದ್ದೇಶ ಮತ್ತು ಈ ಕ್ರಿಕೆಟ್ ಕೋಚಿಂಗ್ ಶಿಬಿರದ ಉದ್ದೇಶವನ್ನು ವಿವರಿಸಿದರು. ಕಾರ್ಯದರ್ಶಿ ಸೋಮಕುಮಾರ್.ಎಸ್ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.