
ದಾಂಡೇಲಿ : ನಗರದ ಅಂಬೇವಾಡಿಯಲ್ಲಿರುವ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ತಾಲ್ಲೂಕಾಡಳಿತ ಮತ್ತು ದಾಂಡೇಲಿ ಜೈನ ಸಮಾಜ ಸೇವಾ ಟ್ರಸ್ಟ್ ಆಶ್ರಯದಡಿ ಭಗವಾನ್ ಶ್ರೀ ಮಹಾವೀರ ಜಯಂತಿಯನ್ನು ಗುರುವಾರ ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಭಗವಾನ್ ಶ್ರೀ ಮಹಾವೀರದ ಭಾವಚಿತ್ರಕ್ಕೆ ಆರತಿಯನ್ನು ಬೆಳಗಿ ಪುಷ್ಪ ಗೌರವವನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಿರಸ್ತೇದಾರ ಸುರೇಶ ಅಗಡಿ, ದಾಂಡೇಲಿ ಜೈನ ಸಮಾಜ ಸೇವಾ ಟ್ರಸ್ಟಿನ ಅಧ್ಯಕ್ಷ ಸಂದೇಶ್ ಎಸ್.ಜೈನ್, ಪ್ರಧಾನ ಕಾರ್ಯದರ್ಶಿ ಮಹಾವೀರ ನೆರ್ಲೇಕರ ಅವರು ಭಗವಾನ್ ಮಹಾವೀರರು ಅಹಿಂಸೆಯ ಪ್ರತಿಪಾದಕರಾಗಿದ್ದು, ವಿಶ್ವದಲ್ಲಿ ಶಾಂತಿ ಮತ್ತು ಅಹಿಂಸೆಯನ್ನು ಬಯಸಿ ತ್ಯಾಗ ಮತ್ತು ತಪಸ್ಸು ಮಾಡಿದವರು. ಮಹಾವೀರರು ಬೋಧಿಸಿದ ಪಂಚಶೀಲ ತತ್ವಗಳಾದ ಸತ್ಯ, ಅಹಿಂಸೆ, ಅಪರಿಗ್ರಹ, ಕ್ಷಮೆ ಮತ್ತು ಬ್ರಹ್ಮಚರ್ಯವನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಸ್ವಾಸ್ಥ್ಯ ಸಮಾಜ ನಿರ್ಮಾಣ ಸುಲಭ ಸಾಧ್ಯ ಎಂದರು.
ತಾಲೂಕಾಡಳಿತದ ಪರವಾಗಿ ಜೈನ ಸಮಾಜದ ಹಿರಿಯರಾದ ಮಹಾವೀರ ಬಂಡಿ ಮತ್ತು ಎಸ್.ಕೆ.ಬನ್ಸಾಲಿ ಅವರನ್ನು ಸನ್ಮಾನಿಸಲಾಯ್ತು. ವಿದ್ಯಾಸಾಗರ ಮುನಿ ಮಹಾರಾಜರ ಪ್ರೀತಿಗೆ ಪಾತ್ರರಾಗಿದ್ದ ಮತ್ತು ಛತ್ತಿಸಘಡದ ಡೊಂಗರಘಡ್ ನಲ್ಲಿ ವಿದ್ಯಾಸಾಗರ ಮುನಿ ಮಹಾರಾಜರ ಕಲ್ಪನೆಯ ಬಸದಿ ನಿರ್ಮಾಣದ ಮರದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ದಾಂಡೇಲಿಯ ಉದ್ಯಮಿ ಪ್ರೇಮಾನಂದ ಗವಸ ಅವರನ್ನು ದಾಂಡೇಲಿ ಜೈನ ಸಮಾಜ ಸೇವಾ ಟ್ರಸ್ಟ್ ವತಿಯಿಂದ ಗೌರವಿಸಲಾಯಿತು.
ಸನ್ಮಾನಕ್ಕೆ ಕೃತಜ್ಞತೆಯನ್ನು ಸಲ್ಲಿಸಿ ಮಾತನಾಡಿದ ಪ್ರೇಮಾನಂದ ಗವಸ ಅವರು ಜೈನ ಧರ್ಮೀಯರು ಅತ್ಯಂತ ಶಾಂತಿ ಪ್ರಿಯರು. ಜಗತ್ತಿಗೆ ಅಹಿಂಸೆಯನ್ನು ಬೋಧಿಸಿದ ಧರ್ಮ ಜೈನ ಧರ್ಮ. ಪೂಜ್ಯ ವಿದ್ಯಾಸಾಗರ ಮುನಿ ಮಹಾರಾಜರೊಂದಿಗೆ ಒಡನಾಟ ನನ್ನ ಬದುಕಿನಲ್ಲಿ ದೊರೆತ ಮಹತ್ವದ ಸೌಭಾಗ್ಯ ಎಂದು, ಜೈನ ಧರ್ಮದ ಆಚರಣೆ, ಆಚಾರ ವಿಚಾರಗಳು ನಮಗೆಲ್ಲರಿಗೂ ಸದಾ ಪ್ರೇರಣಾದಾಯಿ ಎಂದರು.
ಈ ಸಂದರ್ಭದಲ್ಲಿ ಆಹಾರ ನಿರೀಕ್ಷಕ ಗೋಪಿ ಚೌಹ್ವಾಣ್, ಕಂದಾಯ ನಿರೀಕ್ಷಕ ರಾಘವೇಂದ್ರ ಪಾಟೀಲ್, ತಹಶೀಲ್ದಾರ್ ಕಾರ್ಯಾಲಯದ ಮುಕುಂದ ಬಸವಮೂರ್ತಿ, ದಾಂಡೇಲಿ ಜೈನ ಸಮಾಜ ಸೇವಾ ಟ್ರಸ್ಟಿನ ಕಾರ್ಯಾಧ್ಯಕ್ಷ ನಾಗೇಂದ್ರನಾಥ, ಸಮಾಜದ ಪ್ರಮುಖರು ಹಾಗೂ ಜೈನ ಸಮಾಜ ಬಾಂಧವರು ಉಪಸ್ಥಿತರಿದ್ದರು.