
ಯಲ್ಲಾಪುರ:
ರಾಜ್ಯ ಸರಕಾರದ ಬಣ್ಣ ಬಯಲು ಮಾಡಲು ಜನಾಕ್ರೋಶ ಯಾತ್ರೆ ಮಾಡುತ್ತಿದ್ದೇವೆ. ಬೆಲೆ ಏರಿಕೆ ಮಾಡಿ ಜನರನ್ನು ಕೊಳ್ಳೆಹೊಡೆಯುತ್ತಿದ್ದಾರೆ. ಅದರ ಬಿಸಿ ಸರಕಾರಕ್ಕೆ ತಟ್ಟಲಿದೆ ಎಂದು ಬಿಜೆಪಿಯ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಗುಡುಗಿದರು.
ಯಲ್ಲಾಪುರದಲ್ಲಿ ನಡೆದ ಜನಾಕ್ರೋಶ ಯಾತ್ರೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರಕ್ಕೆ ಜನರು ಹಿಡಿಶಾಪ ಹಾಕುತ್ತಿದ್ದಾರೆ. ಚುನಾವಣೆ ಪೂರ್ವದಲ್ಲಿ ಭರವಸೆ ಮೂಡಿಸಿ ಇದೀಗ ಬೆಲೆ ಏರಿಕೆ ಮಾಡುತ್ತಿದ್ದಾರೆ. ಹೀಗಾಗಿ ಬೆಲೆ ಏರಿಕೆ ಸರಕಾರವಾಗಿದ್ದು ಹಿಂದೂಗಳನ್ನ ಅವಮಾನ ಮಾಡುತ್ತಿದೆ. ಮುಖ್ಯಮಂತ್ರಿಗಳಿಗೆ ಕುರ್ಚಿ ಅಲ್ಲಾಡಿದರೆ ಮಾತ್ರ ಜಾತಿ ಜನಗಣತಿ ನೆನಪಾಗುತ್ತದೆ. ಅದನ್ನು ಸರಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಜನತೆಗೆ ನ್ಯಾಯ ಕೊಡುವ ಜವಾಬ್ದಾರಿ ಇಲ್ಲ ಎಂದರು.
ಬಿಜೆಪಿ ಮೇಲೆ ಮಾಡಿದ್ದ 40 ಪರ್ಸೆಂಟ್ ಆರೋಪ ಕೇವಲ ರಾಜಕೀಯ ಪ್ರೇರಿತ. ಆದರೆ ಕಾಂಗ್ರೆಸ್ ಸರಕಾರ ಬಂದ ಬಳಿಕ ಕರ್ನಾಟಕವು ಬ್ರಷ್ಟಾಚಾರದಲ್ಲಿ ಪ್ರಥಮ ಸ್ಥಾನದಲ್ಲಿದೆ. ಪೊಲೀಸ್ ಇಲಾಖೆಗೂ ಸರಿಯಾಗಿ ಸಂಬಳ ಜಮಾ ಆಗುತ್ತಿಲ್ಲ. ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಹೀಗಾಗಿ ಬೆಲೆ ಏರಿಕೆ ಮಾಡುತ್ತಿದ್ದಾರೆ ಎಂದರು.