
ಜೋಯಿಡಾ: ಕುಣಬಿ ಸಮುದಾಯದವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಬೇಕಾದ ಎಲ್ಲಾ ಅರ್ಹತೆಗಳಿರುವ ಬಗ್ಗೆ ಕಳೆದ ಹತ್ತಾರು ವರ್ಷಗಳ ಹಿಂದೆಯೇ ತಿಳಿದುಕೊಂಡಿರುವೆ. ರಾಜ್ಯ ಸರ್ಕಾರ ಈ ಬಗ್ಗೆ ನಡೆಸಿದ ಅಧ್ಯಯನದ ವರದಿಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಿದೆ. ಆದಷ್ಟು ಶೀಘ್ರ ಕುಣಬಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಂದ್ರ ಸರ್ಕಾರ ಅಗತ್ಯ ಕ್ರಮವನ್ನು ಕೈಗೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರಕಾರಕ್ಕೆ
ಪತ್ರ ಬರೆಯಲಾಗುವುದು ಎಂದು ರಾಜ್ಯ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ನಾಗಮೋಹನದಾಸ್ ಅವರು ಹೇಳಿದರು.
ಅವರು ಇಂದು ಶನಿವಾರ ಮಧ್ಯಾಹ್ನ ೧೨ ಗಂಟೆ ಸುಮಾರಿಗೆ ಜೊಯಿಡಾ ತಾಲೂಕಿನ ಕಾರ್ಟೋಳಿ ಗ್ರಾಮಕ್ಕೆ ಭೇಟಿ ನೀಡಿ ಜಿಲ್ಲಾ ಕುಣಬಿ ಸಮಾಜದವರು ನೀಡಿದ ಮನವಿ ಸ್ವೀಕರಿಸಿ ಮಾತನಾಡಿದರು. ನೆರೆಯ ಗೋವಾ ರಾಜ್ಯದ ಕುಣಬಿಗಳು ಪರಿಶಿಷ್ಟ ಪಂಗಡದ ಸೌಲಭ್ಯವನ್ನು ಕಳೆದ ೨೨ ವರ್ಷಗಳಿಂದ ಪಡೆಯುತ್ತಿದ್ದಾರೆ. ಪರಿಶಿಷ್ಟ ಪಂಗಡಕ್ಕೆ ಸೇರಿಸುವುದು ನಿಮ್ಮ ಹಕ್ಕು, ಇದರ ಹೊರತಾಗಿ ಶಿಕ್ಷಣ ಅತಿಮುಖ್ಯ. ನಿರುದ್ಯೋಗ ನಿವಾರಣೆ ಹಂತ ಹಂತವಾಗಿ ಆಗಬೇಕು. ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರ ತೆರೆದು ಆ ಮೂಲಕ ಯುವಕರು ಕೌಶಲ್ಯ ಪಡೆದು ಮೊದಲ ಹಂತದಲ್ಲಿ ಕೃಷಿ ಜೊತೆಗೆ ಸಣ್ಣ ಸಣ್ಣ ಉದ್ಯೋಗ ಮಾಡುವುದರ ಮೂಲಕ ಆರ್ಥಿಕ ಸದೃಢರಾಗಬೇಕೆಂದರು. ಪ್ರತಿ ತಿಂಗಳು ಸಮಾಜದ ಸಭೆ ಸೇರುವ ಮೂಲಕ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿ ಪರಿಹಾರ ಕಂಡುಕೊಳ್ಳಲು ಕಾರ್ಯತಂತ್ರ ರೂಪಿಸಬೇಕೆಂದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಮನವಿ ಸ್ವೀಕರಿಸಿದ ಅವರು ಗಡಿ ಗ್ರಾಮದಲ್ಲಿ ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯದ ಕೊರತೆ ಸಾಕಷ್ಟಿದೆ. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗುತ್ತದೆ. ಇನ್ನು ಕೆಲವೇ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ಮಾಡಿ ಈ ಭಾಗದ ಸಮಸ್ಯೆ ಪರಿಹಾರ ಮಾಡಲು ಮನವಿ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಕುಣಬಿ ಸಮಾಜದ ಸಂಸ್ಥಾಪಕ ಅಧ್ಯಕ್ಷ ಮಾಬಳು ಕುಂಡಲಕರ, ಜಿಲ್ಲಾ ಕುಣಬಿ ಸಮಾಜ ಅಧ್ಯಕ್ಷ ಸುಭಾಷ ಗಾವಡಾ, ತಾಲೂಕು ಅಧ್ಯಕ್ಷ ಪ್ರೇಮಾನಂದ ವೇಳಿಪ, ಉಪಾಧ್ಯಕ್ಷ ಕೃಷ್ಣ ಮಿರಾಶಿ, ಕಾರ್ಯದರ್ಶಿ ರಾಜೇಶ್ ಗಾವಡಾ, ದಯಾನಂದ ಕುಮಗಾಳಕರ, ಖಜಾಂಚಿ ದೀವಾಕರ ಕುಂಡಲಕರ್, ಡಿವೈಎಫ್ಐ ರಾಜ್ಯ ಸಮಿತಿಯ ಸದಸ್ಯರಾದ ಕಾರ್ಯದರ್ಶಿ ಡಿ.ಸ್ಯಾಮಸನ್, ಮುಖಂಡರಾದ ಸುರೇಶ್ ವೇಳಿಪ, ಶಾಂತಾ ವೇಳಿಪ, ಪ್ರಕಾಶ್ ವೇಳಿಪ ಹಾಗೂ ಕುಣಬಿ ಸಮಾಜ ಬಾಂಧವರು ಉಪಸ್ಥಿತರಿದ್ದರು.