
ಹೊನ್ನಾವರ:
ತಾಲೂಕಿನ ಖರ್ವಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಿಬ್ಬಣಗಲ್ ಗ್ರಾಮದಲ್ಲಿ ಅಬಕಾರಿ ಇಲಾಖೆಯ ದಾಳಿಯೊಂದರಲ್ಲಿ 6,600 ಲೀಟರ್ ಕಳ್ಳಭಟ್ಟಿ ಸರಾಯಿ ಪತ್ತೆಯಾಗಿದೆ. ರಾಘವೇಂದ್ರ ವೆಂಕಟರಮಣ ಮೇಸ್ತಾ ಎಂಬುವವರ ವ್ಯಕ್ತಿಯ ಕೋಳಿ ಅಂಗಡಿಯ ಎದುರು ಇರುವ ತಾತ್ಕಾಲಿಕ ಶೆಡ್ ಮೇಲೆ ದಾಳಿ ನಡೆಸಿದ ವೇಳೆ ಕಳ್ಳಭಟ್ಟಿ ಸಾರಾಯಿ ಪತ್ತೆಯಾಗಿದೆ.
ಈ ವೇಳೆ 100 ಮಿಲಿಲೀಟರ್ ಸಾಮರ್ಥ್ಯದ 66 ಸ್ಯಾಚೇಟ್ಗಳಲ್ಲಿ ಒಟ್ಟು 6,600 ಲೀಟರ್ ಕಳ್ಳಭಟ್ಟಿ ಸರಾಯಿ ದಾಸ್ತಾನು ಮಾಡಲಾಗಿತ್ತು. ಇದನ್ನು ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ದಾಸ್ತಾನು ಮಾಡಿರಬಹುದೆಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಜಪ್ತು ಮಾಡಿದ ಮದ್ಯದ ಮಾರುಕಟ್ಟೆ ಮೌಲ್ಯ ₹3,300 ಎಂದು ಅಂದಾಜಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ರಾಘವೇಂದ್ರ ವೆಂಕಟರಮಣ ಮೇಸ್ತಾ ಪರಾರಿಯಾಗಿದ್ದಾನೆ.
ಈ ದಾಳಿಯನ್ನು ಹಿರಿಯ ಅಧಿಕಾರಿಗಳ ನಿರ್ದೇಶನದಡಿಯಲ್ಲಿ ಅಬಕಾರಿ ನಿರೀಕ್ಷಕ ಶ್ರೀಧರ್ ಹೆಚ್.ಮಡಿವಾಳ ನೇತೃತ್ವದ ತಂಡ ನಡೆಸಿದೆ. ಕಾರ್ಯಾಚರಣೆಯಲ್ಲಿ ಅಬಕಾರಿ ಮುಖ್ಯ ಪೇದೆ ವಿಠ್ಠಲ್ ಮಹಾದೇವಪ್ಪ ಕುಂಬಾರ್, ಪೇದೆಗಳಾದ ರಮೇಶ ರಾಮಚಂದ್ರ ರಾಠೋಡ್ ಮತ್ತು ಮುತ್ತೇಪ್ಪ ಬುಗಡಿಕಟ್ಟಿ, ಗೃಹ ರಕ್ಷಕ ದಳದ ಸಿಬ್ಬಂದಿ ಮಂಜುನಾಥ ಜಯರಾಮ ಶೆಟ್ಟಿ ಮತ್ತು ವಾಹನ ಚಾಲಕ ನಾಗರಾಜ್ ಎಂ. ನಾಯ್ಕ ಸಕ್ರಿಯವಾಗಿ ಭಾಗವಹಿಸಿದ್ದರು. ಈ ಸಂಬಂಧ ಅಬಕಾರಿ ಇಲಾಖೆ ಪ್ರಕರಣ ದಾಖಲಿಸಿದೆ.