
ದಾಂಡೇಲಿ :
ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ರೇಡಿಯೇಟರ್ ಯಂತ್ರ ಬಿದ್ದು, ಗುತ್ತಿಗೆ ಕಾರ್ಮಿಕ ಸಾವನ್ನಪ್ಪಿದ ಘಟನೆ ಬುಧವಾರ ಸಂಜೆ ನಡೆದಿದೆ.
ನಗರದ ಹಳೆ ದಾಂಡೇಲಿಯ ನಿವಾಸಿ 55 ವರ್ಷ ವಯಸ್ಸಿನ ಅಬ್ದುಲ್ ಸಲೀಂ ಖಲಾಸಿ ಎಂಬವರೇ ಮೃತಪಟ್ಟ ಗುತ್ತಿಗೆ ಕಾರ್ಮಿಕರಾಗಿದ್ದಾರೆ. ಈ ಬಗ್ಗೆ ಮೃತರ ಪತ್ನಿ ಬಲ್ಕಿಸ್ ಬಾನು ಅವರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಅವರು ನೀಡಿದ ದೂರಿನಲ್ಲಿ ಗುತ್ತಿಗೆದಾರ ಸಾಜಿದ್ ಪಠಾಣ್ ಮತ್ತು ಮೇಲ್ವಿಚಾರಕ ಅಬ್ದುಲ್ ಖಾದರ್ ಪಠಾಣ್ ಇಂದು ಬುಧವಾರ ಸಂಜೆ ನಾಲ್ಕು ಗಂಟೆಯಿಂದ ನಾಲ್ಕುವರೆ ಗಂಟೆಯ ನಡುವಿನ ಅವಧಿಯಲ್ಲಿ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ 6 ನಂಬರ್ ಪ್ಲ್ಯಾಂಟ್’ನ 14ನೇ ಮೀಟರ್ಸ್ ನಲ್ಲಿ ರೇಡಿಯೇಟರ್ ಯಂತ್ರವನ್ನು ಸ್ಥಳಾಂತರ ಮಾಡುವ ಸಮಯದಲ್ಲಿ ಯಾವುದೇ ಸುರಕ್ಷತೆಯ ಕ್ರಮಗಳನ್ನು ಕೈಗೊಳ್ಳದೆ ನಿರ್ಲಕ್ಷತನದಿಂದ ಕೆಲಸ ಮಾಡಿಸಿದರಿಂದ ರೇಡಿಯೇಟರ್ ಯಂತ್ರ ಬಿದ್ದು ಗಂಡ ಅಬ್ದುಲ್ ಸಲೀಂ ಖಲಾಸಿ ಅವರು ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಮೃತ ದೇಹವನ್ನು ನಗರದ ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ತರಲಾಗಿದೆ. ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದಾರೆ. ಸಾರ್ವಜನಿಕ ಆಸ್ಪತ್ರೆಗೆ ಕಾರ್ಖಾನೆಯ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಇತ್ತ ನಗರ ಠಾಣೆಯ ಪಿಎಸ್ಐ ಅಮೀನ್ ಅತ್ತಾರ್ ಹಾಗೂ ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.