
ದಾಂಡೇಲಿ :
ತಾಲೂಕಿನ ಹತ್ತಿರದ ಅಕೋಡಾದ ಬಳಿ ಕಾಳಿ ನದಿಯಲ್ಲಿ ಶನಿವಾರ ಸ್ನಾನಕ್ಕಿಳಿದು ನಾಪತ್ತೆಯಾಗಿದ್ದ ಗಾಂಧಿನಗರದ ಯುವಕನ ಶವ ಭಾನುವಾರ ಬೆಳಿಗ್ಗೆ ಪತ್ತೆಯಾಗಿದೆ.
ಗಾಂಧಿನಗರದ ನಿವಾಸಿ ೧೮ ವರ್ಷ ವಯಸ್ಸಿನ ನಿರುಪಮ್ ನಾಮದೇವ ಕಾಂಬಳೆ ಅಲಿಯಾಸ್ ಭೀಮ್ ಎಂಬಾತನೇ ನದಿಯಲ್ಲಿ ನಾಪತ್ತೆಯಾಗಿ ಇಂದು ಶವವಾಗಿ ಪತ್ತೆಯಾದ ಯುವಕನಾಗಿದ್ದಾನೆ. ಈತ ಗೆಳೆಯರ ಜೊತೆ ಅಕೋಡಾಕ್ಕೆ ಹೋಗಿ ಕಾಳಿ ನದಿಯತ್ತಿರ ಬಂದು ಸ್ನಾನ ಮಾಡಲೆಂದು ನದಿಗಳಿದಿದ್ದಾನೆ. ಈ ಸಂದರ್ಭದಲ್ಲಿ ಈತ ನೀರಲ್ಲಿ ಮುಳುಗಿ ನಾಪತ್ತೆಯಾಗಿದ್ದನು. ಶನಿವಾರ ಮಧ್ಯಾಹ್ನದಿಂದ ಸಂಜೆಯವರೆಗೂ ಈತನನ್ನು ಹುಡುಕುವ ಕಾರ್ಯಾಚರಣೆ ನಡೆದಿತ್ತು. ರಾತ್ರಿಯ ಸಮಯದಲ್ಲಿ ಕಾರ್ಯಾಚರಣೆ ಕಷ್ಟ ಸಾಧ್ಯವಾದ ಹಿನ್ನಲೆಯಲ್ಲಿ ಭಾನುವಾರ ಬೆಳಿಗ್ಗೆ ೬:೩೦ ಗಂಟೆಯಿAದ ಕಾರ್ಯಾಚರಣೆಯನ್ನು ಆರಂಭಿಸಲಾಗಿತ್ತು. ಅಂತಿಮವಾಗಿ ಭಾನುವಾರ ಬೆಳಗ್ಗೆ ನಿರೂಪಮ್ ನಾಮದೇವ ಕಾಂಬಳೆ ಅಲಿಯಾಸ್ ಭೀಮ್ ಈತನ ಶವ ದೊರೆತಿದೆ. ಶವ ಪತ್ತೆಯಾದ ತಕ್ಷಣವೇ ಮಹಾನ್ ಅಡ್ವೆಂಚರ್ಸ್ ಮತ್ತು ಫ್ಲೈ ಕ್ಯಾಚರ್ ರಾಫ್ಟ್ ತಂಡದವರ ಸಹಕಾರದಲ್ಲಿ ಪೊಲೀಸರು ಶವವನ್ನು ಮೇಲಕ್ಕೆ ತಂದಿದ್ದಾರೆ.
ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನಗರದ ಸಾರ್ವಜನಿಕ ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ನಡೆಸಲಾಯ್ತು. ದಾಂಡೇಲಿ ಗ್ರಾಮೀಣ ಠಾಣೆಯ ಪಿಎಸ್ಐ ಶಿವಾನಂದ ನಾವದಗಿ, ಎಸ್ಐಗಳಾದ ವೆಂಕಟೇಶ್ ತೆಗ್ಗಿನ್ ಮತ್ತು ಶಾಂತರಾಮ ಕಾಂಬಳೆ ಹಾಗೂ ಪೊಲೀಸರು ಸ್ಥಳದಲ್ಲಿದ್ದು, ಪರಿಶೀಲನೆಯನ್ನು ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.