ಅಂಕೋಲಾ:
ತಾಲೂಕಿನ ಅಲಿಗೇರಿ ಬಳಿ ನೌಕಾನೆಲೆಯ ವಜ್ರಕೋಶ ಪ್ರದೇಶದಲ್ಲಿ ಸ್ಪೋಟ ಸಂಭವಿಸಿದೆ.
ಸ್ಪೋಟದ ತೀವ್ರತೆಯಿಂದ ಹೊಗೆ ನೇರವಾಗಿ ಬಾನೆತ್ತರಕ್ಕೆ ಚಿಮ್ಮಿದ್ದು, ಸಮೀಪದ ಮೂರಕ್ಕೂ ಹೆಚ್ಚು ಮನೆಗಳ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. 2015ರಲ್ಲಿ ಲೋಕಾರ್ಪಣೆಗೊಂಡ ನೌಕಾನೆಲೆಯ ವಜ್ರಕೋಶ್ ಮದ್ದುಗುಂಡು ಸಂಗ್ರಹಾಲಯದಲ್ಲಿ ಯುದ್ಧ ನೌಕೆಗೆ ಬೇಕಾಗುವ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ಸಂಗ್ರಹಿಸಲಾಗುತ್ತದೆ. ಇಂತಹ ಅತ್ಯಂತ ಭದ್ರತಾ ವಲಯದಲ್ಲೇ ಸ್ಪೋಟ ಸಂಭವಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಸ್ಪೋಟದ ಕಾರಣದ ಬಗ್ಗೆ ನೌಕಾನೆಲೆ ಅಧಿಕಾರಿಗಳು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಒಳಭಾಗದಲ್ಲಿ ಕಾಮಗಾರಿಗಾಗಿ ಸ್ಪೋಟ ನಡೆಸಲಾಗಿದೆಯಾ? ಅಥವಾ ಬೇರೆ ಕಾರಣಕ್ಕೆ ಸ್ಪೋಟವಾಗಿದೆಯಾ? ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸ್ಪೋಟದ ಶಬ್ದ ಮತ್ತು ಹೊಗೆ ನೋಡಿದ ಸ್ಥಳೀಯರು ತಕ್ಷಣವೇ ಕುಮಟಾದ ಎಸಿಗೆ ಹಾಗೂ ಅಂಕೋಲಾದ ತಹಶೀಲ್ದಾರಿಗೆ ಮಾಹಿತಿ ನೀಡಿದ್ದಾರೆ. ನಂತರ ಅಂಕೋಲಾದ ಕಂದಾಯ ಅಧಿಕಾರಿಗಳ ವಿಶೇಷ ತಂಡ ಸ್ಥಳಕ್ಕೆ ಧಾವಿಸಿದೆ. ನೌಕಾನೆಲೆ ಅಧಿಕಾರಿಗಳಿಂದ ಸ್ಪಷ್ಟ ವಿವರಗಳು ಬರುವವರೆಗೆ ಗ್ರಾಮದಲ್ಲಿ ಆತಂಕ ಮುಂದುವರೆಯುವುದು ಸಹಜವಾಗಿದೆ..
ಘಟನೆ ಅಂಕೋಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ ಹಿನ್ನೆಲೆ, ಪೊಲೀಸರು ಕೂಡ ತನಿಖೆಗೆ ತೊಡಗಿದ್ದಾರೆ.
