ಕಾರವಾರ:
ಬಜೆಟ್ನಲ್ಲಿ ಗೌರವಧನ ಹೆಚ್ಚಳ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದ ಬಸ್ ನಿಲ್ದಾಣದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತರ ಸಂಘದ ಜಿಲ್ಲಾ ಸಮಿತಿ ವತಿಯಿಂದ ಶುಕ್ರವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಮುಖಂಡರಾದ ಭವಾನಿಶಂಕರ ಗೌಡ, ಕಳೆದ 2025ರ ಹೋರಾಟದ ಸಂದರ್ಭದಲ್ಲಿ ಸರ್ಕಾರ ನೀಡಿದ್ದ ಕನಿಷ್ಠ 10 ಸಾವಿರ ರೂ. ಗೌರವಧನದ ಭರವಸೆಯು ಈವರೆಗೆ ಆದೇಶವಾಗಿಲ್ಲ. ಕಾಂಗ್ರೆಸ್ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಈಗಿರುವ 5 ಸಾವಿರ ರೂ. ಗೌರವಧನವನ್ನು 8 ಸಾವಿರ ರೂ.ಗೆ ಏರಿಸಲು 14 ತಿಂಗಳಾದರೂ ಕ್ರಮ ಕೈಗೊಂಡಿಲ್ಲ ಎಂದು ಅವರು ಟೀಕಿಸಿದರು.
ತರ್ಕಬದ್ಧಗೊಳಿಸುವ ಹೆಸರಿನಲ್ಲಿ ರಾಜ್ಯದ ಸುಮಾರು 7,000 ಆಶಾ ಕಾರ್ಯಕರ್ತೆಯರನ್ನು ಕೆಲಸದಿಂದ ಕೈಬಿಡುವ ಸರ್ಕಾರದ ನೀತಿಯು ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಇಡೀ ದೇಶದ ಯಾವುದೇ ರಾಜ್ಯದಲ್ಲಿ ಇಲ್ಲದ ಇಂತಹ ಹುನ್ನಾರವನ್ನು ಕರ್ನಾಟಕದ ಆರೋಗ್ಯ ಇಲಾಖೆ ಮಾಡುತ್ತಿರುವುದು ಆಶಾಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿಂದೆ ಆಶಾ ಸುಗಮಕಾರರನ್ನು ಕೈಬಿಟ್ಟಿರುವುದು ಕೂಡ ಅನ್ಯಾಯವಾಗಿದ್ದು, ಅವರನ್ನು ತಕ್ಷಣವೇ ಮರುನೇಮಕ ಮಾಡಿಕೊಳ್ಳಬೇಕು ಮತ್ತು ಬಾಕಿ ಇರುವ ಗೌರವಧನವನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಲಾಯಿತು.
ಜಿಲ್ಲಾಧ್ಯಕ್ಷೆ ಪದ್ಮಾವತಿ ಚಲವಾದಿ, ಸಂಗೀತಾ, ಶ್ವೇತಾ ಕಪಟ್ಕರ್, ನಿವೇದಿತಾ ಕೊಳಂಬಕರ್, ಪ್ರಭಾಮಣಿ ಜೈನ್ ಸೇರಿದಂತೆ ನೂರಾರು ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.
