ದಾಂಡೇಲಿ : ಭಾರತೀಯ ಸೈನ್ಯದಲ್ಲಿ ಕಳೆದ 22 ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಿ, ನಿವೃತರಾಗಿ ತಾಯ್ನಾಡಿಗೆ ಮರಳಿದ ಯೋಧ ನಗರದ 14ನೇ ಬ್ಲಾಕ್ ನಿವಾಸಿ ಬಸವನಗೌಡ ಪಾಟೀಲ್ ಅವರಿಗೆ ಶಾಸಕ ಆರ್.ವಿ.ದೇಶಪಾಂಡೆಯವರ ವತಿಯಿಂದ ದಾಂಡೇಲಿಯ ಬ್ಲಾಕ್ ಕಾಂಗ್ರೆಸ್ ಸಮಿತಿಯು ಬುಧವಾರ ಗೌರವಪೂರ್ವಕವಾಗಿ ಸನ್ಮಾನಿಸಿತು.
ನಿವೃತ್ತ ಯೋಧ ಬಸವನಗೌಡ ಪಾಟೀಲ್ ಅವರ 14ನೇ ಬ್ಲಾಕ್ ಪ್ರದೇಶದಲ್ಲಿರುವ ಸ್ವಗೃಹಕ್ಕೆ ತೆರಳಿದ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಮೋಹನ ಹಲವಾಯಿಯವರ ನೇತೃತ್ವದ ನಿಯೋಗ ಶಾಸಕ ಆರ್.ವಿ.ದೇಶಪಾಂಡೆಯವರು ಕಳುಹಿಸಿಕೊಟ್ಟ ಸ್ಮರಣಿಕೆಯನ್ನು ಬಸವನಗೌಡ ಪಾಟೀಲ್ ಹಾಗೂ ಐಶ್ವರ್ಯ ದಂಪತಿಗೆ ನೀಡಿ ಶಾಲು ಹೊದಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮೋಹನ ಹಲವಾಯಿಯವರು ಭಾರತೀಯ ಸೈನ್ಯದಲ್ಲಿ 22 ವರ್ಷಗಳ ಸಾರ್ಥಕ ಸೇವೆಯನ್ನು ಸಲ್ಲಿಸಿದ ಬಸವನಗೌಡ ಪಾಟೀಲ್ ಅವರು ನಮ್ಮ ದಾಂಡೇಲಿಯವರು ಎನ್ನುವುದು ನಮಗೆಲ್ಲಾ ಅಭಿಮಾನದ ಸಂಗತಿ. ಅದರಲ್ಲೂ ಆಪರೇಷನ್ ಸಿಂಧೂರ ತಂಡದಲ್ಲಿಯೂ ಸೇವೆ ಸಲ್ಲಿಸಿದ ಹೆಗ್ಗಳಿಕೆಯನ್ನು ಹೊಂದಿರುವ ಬಸವನಗೌಡ ಪಾಟೀಲ ಅವರ ಈ ಸೇವೆ ದಾಂಡೇಲಿಗೆ ಬಹಳ ದೊಡ್ಡ ಗೌರವವನ್ನು ತಂದು ಕೊಟ್ಟಿದೆ. ಕ್ಷೇತ್ರದ ಶಾಸಕರಾದ ಆರ್.ವಿ. ದೇಶಪಾಂಡೆಯವರು ನಿವೃತರಾಗಿ ತಾಯ್ನಾಡಿಗೆ ಬರುವ ಯೋಧರನ್ನು ಸನ್ಮಾನಿಸುವ ಒಂದು ಮಾದರಿ ಪರಂಪರೆಯನ್ನು ಕಳೆದ ಅನೇಕ ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ದೇಶ ಸೇವೆಯನ್ನು ಮಾಡಿದ ಯೋಧರನ್ನು ಮತ್ತು ಅವರ ಕುಟುಂಬವನ್ನು ನಾವು ನೀವೆಲ್ಲರೂ ಸದಾ ಗೌರವಿಸುವ ಮೂಲಕ ಅವರ ಸೇವೆಗೆ ನಿಜವಾದ ಪ್ರೀತಿಯ ಬದ್ಧತೆಯನ್ನು ತೋರಿಸಬೇಕೆಂದು ಕರೆ ನೀಡಿದರು.
ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಬಸವನಗೌಡ ಪಾಟೀಲ್ ಅವರು ನನ್ನ ಇಷ್ಟು ವರ್ಷಗಳ ಸೇವೆಯನ್ನು ಗುರುತಿಸಿ, ನನ್ನನ್ನು ಸನ್ಮಾನಿಸಿದ ಆರ್.ವಿ. ದೇಶಪಾಂಡೆಯವರಿಗೆ ಮತ್ತೆ ಬ್ಲಾಕ್ ಕಾಂಗ್ರೆಸ್ ಎಲ್ಲ ಪದಾಧಿಕಾರಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಭಾರತೀಯ ಸೈನ್ಯದಲ್ಲಿ ಸೇವೆಯನ್ನು ಸಲ್ಲಿಸಲು ಅನುಗ್ರಹಿಸಿದ ತಂದೆ- ತಾಯಿ,ಪ್ರೋತ್ಸಾಹಿಸಿದ ಕುಟುಂಬಸ್ಥರು ಹಾಗೂ ಸ್ನೇಹಿತ ವರ್ಗದ ಸದಾ ಪ್ರೀತಿ ಪ್ರೋತ್ಸಾಹ ನನ್ನ ಇಷ್ಟು ವರ್ಷಗಳ ಸೇವೆಗೆ ಶಕ್ತಿಯನ್ನು ನೀಡಿದೆ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೀರ್ತಿ ಗಾಂವಕರ, ಕೆಪಿಸಿಸಿ ಸದಸ್ಯ ಕರೀಂ ಅಜ್ರೇಕರ, ಕಾಂಗ್ರೆಸ್ ಮುಖಂಡರಾದ ತಸ್ವರ ಸೌದಾಗರ, ಆರ್.ಪಿ.ನಾಯ್ಕ, ಅನಿಲ್ ದಂಡಗಲ್, ಅನಿಲ್ ನಾಯ್ಕರ, ಪ್ರಾನ್ಸಿಸ್ ಮಸ್ಕರೇನಸ್, ರವಿ ಚಾಟ್ಲಾ, ರವಿ ಚೌವ್ಹಾಣ್, ಮ್ಯಾಥ್ಯೂಸ್ ಕೊಂಡಟ್ಟಿ ಉಪಸ್ಥಿತರಿದ್ದರು.
