ಶಿರಸಿ:
ಸಾಲ ಮರುಪಾವತಿಸಲು ಕೇಳಿದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬಳಿಗೆ ಹಿಗ್ಗಾಮುಗ್ಗಾ ಥಳಿತ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ನೆಹರು ನಗರದಲ್ಲಿ ನಡೆದಿದೆ.
ಯಲ್ಲಾಪುರ ಮೂಲದ ಅಯಿಷಾ ಮತ್ತು ಗೀತಾ ಎಂಬ ಮಹಿಳೆಯರಿಗೆ ಮೊಹಮ್ಮದ್ ಸಲ್ಮಾನ್ ಹಾಗೂ ಅವನ ಸಹಚರರಿಂದ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮಹಿಳೆಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಹಿಳೆಯರೆನ್ನದೆ ಎದೆ ಭಾಗಕ್ಕೆ ಕೂಡ ಒದೆ ಹೊಡೆದಿರುವುದಾಗಿ ಆರೋಪಿಸಲಾಗಿದೆ.
ದೂರುದಾರ್ತಿ ಅಯಿಷಾ ಅವರು ಅಂಗಡಿ ಆರಂಭಿಸಲು ಸಲ್ಮಾನ್ ಎಂಬ ವ್ಯಕ್ತಿಗೆ ₹3,80,000 ಹಣ ನೀಡಿದ್ದರು. ಈ ನಡುವೆ ಪತಿ ಮೃತಪಟ್ಟ ಹಿನ್ನೆಲೆ ಅವರು ಕೆಲವು ದಿನಗಳು ಹುಬ್ಬಳ್ಳಿಯಲ್ಲಿ ವಾಸವಾಗಿದ್ದರು. ಬಳಿಕ ಎರಡು ತಿಂಗಳ ನಂತರ ಯಲ್ಲಾಪುರಕ್ಕೆ ಮರಳಿದಾಗ, ಸಲ್ಮಾನ್ ಅಲ್ಲಿಲ್ಲದೆ ಶಿರಸಿಯಲ್ಲಿ ವ್ಯಾಪಾರ ನಡೆಸುತ್ತಿದ್ದಾನೆಂದು ತಿಳಿದುಬಂದಿದೆ.
ಇದರಿಂದ ಅಯಿಷಾ ಹಾಗೂ ಗೀತಾ ಶಿರಸಿಗೆ ತೆರಳಿ ಹಣ ಹಿಂತಿರುಗಿಸುವಂತೆ ಕೇಳಿದ್ದಾರೆ. ಈ ವೇಳೆ ಮಾತುಕತೆ ನಡೆಯುತ್ತಿರುವಾಗಲೇ ಏಕಾಏಕಿ ನಾಲ್ಕೈದು ಮಂದಿ ಸ್ಥಳಕ್ಕೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
