ದಾಂಡೇಲಿಯ ರೋಟರಿ ಕ್ಲಬ್, ಕುಂದಾಪುರದ ಬೆನಕ ಇವೆಂಟ್ಸ್ ಮತ್ತು ಅಂಕೋಲಾದ ಶ್ರೀ ಗುರು ರಾಘವೇಂದ್ರ ಇವೆಂಟ್ಸ್ ಸಹಯೋಗದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ಬೃಹತ್ ಆಹಾರ ಮೇಳ ಮತ್ತು ಸ್ವದೇಶಿ ಮೇಳಕ್ಕೆ ಶುಕ್ರವಾರ ವಿದ್ಯಾಧಿರಾಜ ಸಭಾ ಭವನದಲ್ಲಿ ತಹಶೀಲ್ದಾರ ಶೈಲೇಶ ಪರಮಾನಂದ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಇದೊಂದು ಉತ್ತಮವಾದ ಕಾರ್ಯಕ್ರಮ ಹಾಗೂ ವಿಶೇಷವಾಗಿ ಮಹಿಳೆಯರನ್ನು ಆಕರ್ಷಿಸುವ ಕಾರ್ಯಕ್ರಮವಾಗಿದೆ. ಇವತ್ತು ಸ್ವದೇಶಿ ಉತ್ಪನ್ನ ಹಾಗೂ ಗೃಹೋತ್ಪನ್ನಗಳ ಬಳಕೆಯೇ ಮನಸ್ಸಿಗೆ ಮುದ ನೀಡುತ್ತದೆ ಎಂದರು.
ರೋಟರಿ ಕ್ಲಬ್ ನ ಕಾರ್ಯಕ್ರಮ ಸಂಯೋಜಕ ಎಸ್. ಪ್ರಕಾಶ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ ದಾಂಡೇಲಿಯಲ್ಲಿ ಮೊಟ್ಟಮೊದಲ ಬಾರಿಗೆ ಇಂಥದೊಂದು ಮೇಳ ನಡೆಯುತ್ತಿದ್ದು ದಾಂಡೇಲಿಯ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು. ಕಾರ್ಯಕ್ರಮ ಸಂಘಟಕರಾದ ಬೆನಕ ಇವೆಂಟ್ಸನ ಗಣೇಶ್ ಶೆಟ್ಟಿ ಕಾರ್ಯಕ್ರಮ ಸಂಘಟನೆಯ ವಿಶೇಷತೆ ಬಗ್ಗೆ ತಿಳಿಸಿದರು.
ರೋಟರಿ ಕ್ಲಬ್ ಅಧ್ಯಕ್ಷ ಅಶುತೋಶಕುಮಾರ್ ರಾಯ್ ಸ್ವಾಗತಿಸಿದರು. ರೋಟರಿ ಹಿರಿಯ ಸದಸ್ಯ ಆರ್.ಪಿ. ನಾಯ್ಕ್ ರೋಟರಿ ಪ್ರತಿಜ್ಞಾವಿಧಿ ಬೋಧಿಸಿದರು. ರೋಟರಿ ಕಾರ್ಯದರ್ಶಿ ಮಿಥುನ್ ನಾಯಕ ವಂದಿಸಿದರು. ಸೋಮಕುಮಾರ್ ಎಸ್. ನಿರೂಪಿಸಿದರು. ವೇದಿಕೆಯಲ್ಲಿ ವಿದ್ಯಾಧಿರಾಜ ಸಭಾಭವನ ಸಮಿತಿಯ ಅಧ್ಯಕ್ಷ ಜನಾರ್ಧನ ಪ್ರಭು, ಅಂಕೋಲಾದ ಶ್ರಿ ಗುರು ರಾಘವೇಂದ್ರ ಇವೆಂಟ್ಸನ ಮುಖ್ಯಸ್ಥರಾದ ಗಣೇಶ್ ಗುನುಗಾ ಮುಂತಾದವರಿದ್ದರು.
ರೋಟರಿ ಪ್ರಮುಖರಾದ ಡಾ. ಎಸ್. ಎನ್. ದಪೇದಾರ, ಸುಧಾಕರ್ ಶೆಟ್ಟಿ, ಶೇಖರ್ ಪೂಜಾರಿ, ಮುಂತಾದವರು ಉಪಸ್ಥಿತರಿದ್ದರು.
ಮೇಳದಲ್ಲಿ ವಿಶೇಷವಾಗಿ ಇಳಕಲ್ ಹಾಗೂ ಖಾದಿ ಸೀರೆಗಳು, ಅಲಂಕಾರಿಕ ವಸ್ತುಗಳು, ಗೃಹಬಳಕೆಯ ವಸ್ತುಗಳು, ಬಿದಿರಿನ ಉತ್ಪನ್ನಗಳು, ಮಣ್ಣಿನ ಮಡಕೆಗಳು, ಹಲಸಿನ ಹಣ್ಣಿನ ಜಾಮ್, ಉಪ್ಪಿನಕಾಯಿ, ಹುಣಸೆ ಹುಳಿ ಚಟ್ನಿ, ಅಪ್ಪೆ ಮಿಡಿ ಚಟ್ನಿ, ಹಲಸಿನ ಸ್ವಾಪ್ಟಿ, ನ್ಯಾಚುರಲ್ ಐಸ್ ಕ್ರೀಮ್, ಮಣ್ಣಿನ ಆಭರಣಗಳು, ತಿನಿಸುಗಳು ಮಾವಿನ ಹಣ್ಣಿನ ಸ್ವೀಟ್ ಉಪ್ಪಿನಕಾಯಿ, ಸುಂದರ ಶಿಲಾಮೂರ್ತಿಗಳು, ಬ್ಯೂಟಿ ಪ್ರಾಡಕ್ಟ್ & ಬ್ಯಾಗ್, ಸದಭಿರುಚಿಯ ಪುಸ್ತಕಗಳ ಮಳಿಗೆಗಳು ಎಲ್ಲರ ಗಮನ ಸೆಳೆಯುತ್ತಿದೆ.
