ಶಿರಸಿ: ಗ್ರಾಮೀಣ ಭಾಗದ ರಸ್ತೆ ಸಮಸ್ಯೆಗಳಿಗೆ ಪರಿಹಾರ ಸಿಗದೆ ಸಾರ್ವಜನಿಕರು ಪರದಾಡುತ್ತಿರುವ ಸಂದರ್ಭದಲ್ಲೇ, ಅಧಿಕಾರಿಗಳಿಗಾಗಿ ಕಾಯದೆ ಗ್ರಾಮಸ್ಥರೇ ಸಮಸ್ಯೆ ನಿವಾರಣೆಗೆ ಮುಂದಾಗಿರುವ ಘಟನೆ ಶಿರಸಿ ತಾಲೂಕಿನ ಮತ್ತಿಹಳ್ಳಿಯಲ್ಲಿ ನಡೆದಿದೆ. ಶ್ರೀ ರಾಮಾಂಜನೇಯ ಯುವಕ ಸಂಘದ ನೇತೃತ್ವದಲ್ಲಿ ಯುವಕರು ಹೊಂಡಗುಂಡಿಗಳಿಂದ ಹದಗೆಟ್ಟ ರಸ್ತೆಯನ್ನು ದುರಸ್ತಿಗೊಳಿಸುವ ಜತೆಗೆ ರಸ್ತೆ ಬದಿಯ ಗಿಡಗಂಟಿಗಳನ್ನು ತೆರವುಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಕಲ್ಪಿಸಿದ್ದಾರೆ.
ಮತ್ತಿಹಳ್ಳಿ ಗ್ರಾಮದ ಬಂಕನಾಳ–ಮಾಳಂಜಿ–ಕುಪ್ಪಗಡ್ಡೆ–ದಾಸನಕೊಪ್ಪ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯು ಹಲವು ದಿನಗಳಿಂದ ಹೊಂಡಗುಂಡಿಗಳಿಂದ ಕೂಡಿತ್ತು. ಮಳೆ ಹಾಗೂ ನಿರಂತರ ವಾಹನ ಸಂಚಾರದಿಂದ ರಸ್ತೆಯ ಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ದ್ವಿಚಕ್ರ ವಾಹನ ಸವಾರರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಪ್ರತಿನಿತ್ಯ ಈ ಮಾರ್ಗ ಬಳಸುವವರು ತೊಂದರೆ ಅನುಭವಿಸುವಂತಾಗಿತ್ತು.
ಸಮಸ್ಯೆಯನ್ನು ಗಮನಿಸಿದ ಯುವಕ ಸಂಘದ ಸದಸ್ಯರು ರಸ್ತೆ ದುರಸ್ತಿಯ ಹೊಣೆಯನ್ನು ತಾವೇ ವಹಿಸಿಕೊಂಡರು. ರಸ್ತೆಯಲ್ಲಿದ್ದ ಹೊಂಡಗುಂಡಿಗಳನ್ನು ಸರಿಪಡಿಸುವ ಕಾರ್ಯದ ಜತೆಗೆ, ರಸ್ತೆ ಬದಿಯಲ್ಲಿ ಬೆಳೆದು ಸಂಚಾರಕ್ಕೆ ಅಡ್ಡಿಯಾಗಿದ್ದ ಗಿಡಗಂಟಿಗಳನ್ನು ಕಡಿದು ತೆರವುಗೊಳಿಸಿದರು. ಯುವಕರ ಈ ಕಾರ್ಯಕ್ಕೆ ಗ್ರಾಮಸ್ಥರೂ ಕೈಜೋಡಿಸಿದ್ದು, ಒಟ್ಟಾಗಿ ಶ್ರಮಿಸುವ ಮೂಲಕ ಗ್ರಾಮದ ಸಮಸ್ಯೆಯೊಂದನ್ನು ಪರಿಹರಿಸುವ ಪ್ರಯತ್ನ ನಡೆಸಿದರು.
ಗ್ರಾಮದ ಅಭಿವೃದ್ಧಿ ಎನ್ನುವುದು ಕೇವಲ ಸರ್ಕಾರದ ಹೊಣೆ ಎಂಬ ಮನೋಭಾವ ಬದಲಾಗಬೇಕು. ತಮ್ಮ ಸುತ್ತಮುತ್ತಲಿನ ಸಮಸ್ಯೆಗಳನ್ನು ಗುರುತಿಸಿ, ಸಾಧ್ಯವಾದಷ್ಟು ಪರಿಹಾರ ಕಂಡುಕೊಳ್ಳಲು ಜನರೂ ಮುಂದಾಗಬೇಕು ಎಂಬ ಸಂದೇಶವನ್ನು ಮತ್ತಿಹಳ್ಳಿಯ ಯುವಕರ ಕಾರ್ಯ ಸಾರಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಕೈಗೊಂಡಿರುವ ಈ ಸಮಾಜಮುಖಿ ಸೇವಾ ಕಾರ್ಯಕ್ಕೆ ಗ್ರಾಮಸ್ಥರಿಂದ ಮೆಚ್ಚುಗೆ ವ್ಯಕ್ತವಾಗಿದೆ.
‘ನಮ್ಮ ಗ್ರಾಮ, ನಮ್ಮ ಹೊಣೆ’ ಎಂಬ ಮನೋಭಾವದೊಂದಿಗೆ ಸಂಘದ ಸದಸ್ಯರು ಕೈಗೊಂಡಿರುವ ಕಾರ್ಯ ಮುಂದಿನ ದಿನಗಳಲ್ಲೂ ಮುಂದುವರಿಯಲಿದೆ ಎಂದು ಸಂಘದ ಸದಸ್ಯರು ತಿಳಿಸಿದ್ದಾರೆ.
