ದಾಂಡೇಲಿ : ದಾಂಡೇಲಿ ನವರಾತ್ರಿ ಉತ್ಸವ ಸಮಿತಿ ವತಿಯಿಂದ 5ನೇ ವರ್ಷದ ಶ್ರೀ ದುರ್ಗಾದೇವಿ ಪ್ರತಿಷ್ಠಾಪನಾ ನವರಾತ್ರಿ ಉತ್ಸವವನ್ನು ಅ.11 ರಿಂದ 19 ರವರೆಗೆ ಹಳೆ ನಗರಸಭಾ ಮೈದಾನದಲ್ಲಿ ಅತ್ಯಂತ ವಿಜೃಂಭಣೆಯಿಂದ ಆಯೋಜಿಸಲಾಗಿದೆ ಎಂದು ಸಮಿತಿಯ ಗೌರವಾಧ್ಯಕ್ಷರು ಹಾಗೂ ಅಧ್ಯಕ್ಷರಾದ ಸುನೀಲ ಹೆಗಡೆ ಅವರು ಶನಿವಾರ ಹಳೆ ನಗರಸಭಾ ಮೈದಾನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನವರಾತ್ರಿ ನಮ್ಮ ನಾಡಿನ ಪರಂಪರೆಯ ಭಕ್ತಿ ಪ್ರಧಾನ ಹಬ್ಬ. ದಾಂಡೇಲಿಗೂ ಕೂಡ ನವರಾತ್ರಿ ಹಾಗೂ ದಸರಾ ಹಬ್ಬದ ವಿಶೇಷ ಪರಂಪರೆ ಇದೆ. ದುಷ್ಟರ ಸಂಹಾರದ ವಿಜಯೋತ್ಸವದ ಭಾಗವಾಗಿ ನಡೆಯುವ ಈ ಉತ್ಸವದಲ್ಲಿ ಶ್ರೀ ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪಿಸಿ, ಒಂಬತ್ತು ದಿನಗಳ ಕಾಲ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಆರಾಧಿಸಿ, ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವೈಶಿಷ್ಟ್ಯಪೂರ್ಣವಾಗಿ ಆಚರಿಸಲಾಗುತ್ತಿದೆ. ಈ ವರ್ಷವೂ ಕೂಡ ಎಲ್ಲರ ಸಹಕಾರದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸುನೀಲ ಹೆಗಡೆ ಹೇಳಿದರು.
ಪ್ರತಿದಿನ ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ಆರತಿ, ಪೂಜೆ ಹಾಗೂ ಪ್ರಸಾದ ವಿತರಣೆ ಇರುತ್ತದೆ. ಹಳೆ ನಗರಸಭಾ ಮೈದಾನದಲ್ಲಿ ಅಲಂಕೃತಗೊಂಡ ಭವ್ಯ ವೇದಿಕೆಯಲ್ಲಿ ಶೃಂಗಾರ ಮೂರ್ತಿಗೆ ವಿಶೇಷ ಪೂಜೆ, ದೇವಿಗೆ ಇಷ್ಟವಾದ ದಾಂಡಿಯಾ ಹಾಗೂ ಸ್ಪರ್ಧೆಗಳು, ಸ್ಥಳೀಯ ಹಾಗೂ ಆಹ್ವಾನಿತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ತಿಂಡಿ-ಮಳಿಗೆಗಳು ಹಾಗೂ ಮನರಂಜನಾ ಆಟಗಳು ಇರಲಿವೆ ಎಂದು ವಿವರಿಸಿದರು.
ಒಂಬತ್ತು ದಿನಗಳ ಕಾಲ ನಡೆಯುವ ಉತ್ಸವದಲ್ಲಿ ಹಲವು ಮುಖ್ಯ ಆಕರ್ಷಣೆಗಳಿವೆ. ಅ.11ರಂದು ಬೆಳಿಗ್ಗೆ 10 ಗಂಟೆಗೆ ಶ್ರೀ ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪನೆಯೊಂದಿಗೆ ಉತ್ಸವಕ್ಕೆ ಚಾಲನೆ ದೊರೆಯಲಿದ್ದು, ಸಂಜೆ ಸಹ್ಯಾದ್ರಿ ಲಲಿತ ಕಲಾ ಕೇಂದ್ರ ಹಾಗೂ ಸುಸ್ವರ ಸಂಗೀತ ವಿದ್ಯಾಸಂಸ್ಥೆಯಿಂದ ಸುಗಮ ಸಂಗೀತ ಕಾರ್ಯಕ್ರಮ ಜರುಗಲಿದೆ. ಅ.12ರಂದು ಸಂಜೆ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಅಂತರಾಷ್ಟ್ರೀಯ ಖ್ಯಾತಿಯ ರೂಪಕಲಾ ಕುಂದಾಪುರದ ‘ಮೂರು ಮುತ್ತು’ ತಂಡದಿಂದ ಕನ್ನಡ ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ. ಅ. 13ರಂದು ಬ್ರಹ್ಮಕುಮಾರಿ ತಂಡದಿಂದ ವಿಶೇಷ ರೂಪಕ ಪ್ರಸ್ತುತವಾಗಲಿದೆ. ಅ. 14ರಂದು ಸ್ಥಳೀಯ ಕಲಾವಿದರಿಂದ ರಸಮಂಜರಿ ಕಾರ್ಯಕ್ರಮದ ಜೊತೆಗೆ ರಾತ್ರಿ 10 ಗಂಟೆಗೆ ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾವಿದರು ಅಭಿನಯಿಸುವ ‘ಮಂದಾರ್ತಿ ಮಾದೇವಿ’ ಎಂಬ ನೃತ್ಯ ಚರಿತೆ ನಡೆಯಲಿದೆ. ಅ.15ರಂದು ಸ್ಥಳೀಯ ಕಲಾವಿದರಿಂದ ಕರೋಕೆ ರಸಮಂಜರಿ ಹಾಗೂ ಬೆಸ್ಟ್ ಡ್ಯಾಂಡಿಯಾ ಡ್ಯಾನ್ಸರ್ ಸ್ಪರ್ಧೆ ಆಯೋಜಿಸಲಾಗಿದೆ. ಅ. 16ರಂದು ಸಂಜೆ 5:00 ಗಂಟೆಯಿಂದ ಅರಿಷಿಣ ಕುಂಕುಮ, ನಂತರ ಸ್ಥಳೀಯ ಕಲಾವಿದರಿಂದ ಸಮೂಹ ಭರತನಾಟ್ಯ ಹಾಗೂ ಡ್ಯಾಂಡಿಯಾ ಡ್ರೆಸ್ಸಿಂಗ್ ಸ್ಪರ್ಧೆಯೊಂದಿಗೆ ರಾತ್ರಿ ‘ ಜೋಯಿಡಾದ ಸುದರ್ಶನ ಹೆಗಡೆ ಹಾಗೂ ತಂಡದವರಿಂದ ಸೇಡಿನ ಜ್ವಾಲೆ’ ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ. ಅ.17ರಂದು ಅನುಭವ ಮಂಟಪದ 12ನೇ ಶತಮಾನದ ರೂಪಕ ಹಾಗೂ ಗ್ರೂಪ್ ಡ್ಯಾಂಡಿಯಾ ಸ್ಪರ್ಧೆ ನಡೆಯಲಿದೆ. ಅ.18ರಂದು ಅಂಧ ಕಲಾವಿದ ಮಂಜುನಾಥ ಕಮಲಾಕರ ನಾಯ್ಕ ನೇತೃತ್ವದಲ್ಲಿ ಭಕ್ತಿ ರಸಮಂಜರಿ, ದಾಂಡಿಯಾ ಹಾಗೂ ಬಹುಮಾನ ವಿತರಣೆ ಮತ್ತು ಕಲಾಧರ ಯಕ್ಷರಂಗ ಬಳಗದವರಿಂದ ಯಕ್ಷಗಾನ ಪ್ರದರ್ಶನ ಇರಲಿದೆ. ಕೊನೆಯ ದಿನವಾದ ಅ.19ರಂದು ಮಧ್ಯಾಹ್ನ 4 ಗಂಟೆಗೆ ಸಾಂಪ್ರದಾಯಿಕ ಉಡುಗೆ ಮತ್ತು ಕಲಾ ತಂಡಗಳೊಂದಿಗೆ ಶ್ರೀ ದೇವಿಯ ಭವ್ಯ ವಿಸರ್ಜನಾ ಮೆರವಣಿಗೆ ನಡೆಯಲಿದೆ.
ಪ್ರತಿದಿನ ರಾತ್ರಿ 8 ರಿಂದ 10 ಗಂಟೆಯವರೆಗೆ ದಾಂಡಿಯಾ ಕಾರ್ಯಕ್ರಮ ನಡೆಯಲಿದ್ದು, ಎಲ್ಲಾ ಭಕ್ತರು ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಸುನೀಲ ಹೆಗಡೆ ಮನವಿ ಮಾಡಿದರು.
ದಾಂಡೇಲಿ ನವರಾತ್ರಿ ಉತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಅಶುತೋಷ್ ಕುಮಾರ್ ರಾಯ್ ಅವರು ಐದನೇ ವರ್ಷದ ನವರಾತ್ರಿ ಉತ್ಸವ ಕಾರ್ಯಕ್ರಮದಲ್ಲಿ ಸರ್ವರೂ ಭಾಗವಹಿಸಿ ಕಾರ್ಯಕ್ರಮವನ್ನು ಚಂದಗಾಣಿಸಿ ಕೊಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ದಾಂಡೇಲಿ ನವರಾತ್ರಿ ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ನರೇಂದ್ರ ಚೌಹ್ವಾಣ್, ಸಮಿತಿಯ ಪ್ರಮುಖರಾದ ಟಿ.ಎಸ್.ಬಾಲಮಣಿ, ಗುರು ಮಠಪತಿ, ಬುಧವಂತಗೌಡ ಪಾಟೀಲ್, ರೋಷನ್ ನೇತ್ರಾವಳಿ, ಮುಸ್ತಾಕ ಐವಾ, ಸುಧಾಕರ ಶೆಟ್ಟಿ, ಚನ್ನಬಸಪ್ಪ ಮುರುಗೋಡ, ನವೀನ ಕಾಮತ್, ದಶರಥ ಬಂಡಿವಡ್ಡರ, ತುಕಾರಾಮ ಬಡಿಗೇರ, ರತ್ನಾಕರ ಗಾಂವಕರ, ಸಾವಿತ್ರಿ ಬಡಿಗೇರ, ಉಮಾ ಹನುಮಸಾಗರ, ಸುನಂದಾ ಕುಂಬಾರ ಮೊದಲಾದವರು ಉಪಸ್ಥಿತರಿದ್ದರು.
