ದಾಂಡೇಲಿ: ನಗರದ ಸಕಲಗಾ ಗ್ರಾಮದಲ್ಲಿರುವ ನಗರಸಭೆಯ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಅಕ್ರಮಗಳು ನಡೆಯುತ್ತಿವೆ ಎಂದು ಆರೋಪಿಸಿರುವ ಸಾಮಾಜಿಕ ಕಾರ್ಯಕರ್ತ ಡಿ. ಸ್ಯಾಮ್ಸನ್ ಅವರು, ಘಟಕದ ಸಮಗ್ರ ನಿರ್ವಹಣೆ, ಗುಜರಿ ವಸ್ತುಗಳ ಮಾರಾಟ ಹಾಗೂ ಟೆಂಡರ್ ಪ್ರಕ್ರಿಯೆಗಳನ್ನು ಲೋಕಾಯುಕ್ತ ತನಿಖೆಗೆ ಒಳಪಡಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಉತ್ತರ ಕನ್ನಡ ಜಿಲ್ಲಾ ಲೋಕಾಯುಕ್ತ ಡಿವೈಎಸ್ಪಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ತ್ಯಾಜ್ಯ ವಿಂಗಡಣಾ ಘಟಕದಲ್ಲಿ ಹಸಿ ಮತ್ತು ಒಣ ಕಸವನ್ನು ಸಮರ್ಪಕವಾಗಿ ವಿಂಗಡಿಸಿ, ಗೊಬ್ಬರ ಹಾಗೂ ಮರುಬಳಕೆಯ ವಸ್ತುಗಳನ್ನು ಉತ್ಪಾದಿಸಿ ಮಾರಾಟ ಮಾಡಬೇಕಾಗಿದೆ. ಆದರೆ, ಕಳೆದ ವರ್ಷ ಘಟಕದಲ್ಲಿದ್ದ ಟ್ರಕ್ ಲೋಡ್ಗಟ್ಟಲೆ ಗುಜರಿ ವಸ್ತುಗಳನ್ನು ಯಾವುದೇ ನಿಯಮ ಪಾಲಿಸದೆ ಅಕ್ರಮವಾಗಿ ಮಾರಾಟ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ.
ಇತ್ತೀಚೆಗೆ ಘಟಕದಲ್ಲಿದ್ದ ಮೋಟರ್ಗಳು ಕಳ್ಳತನವಾಗಿದ್ದು, ಕಳ್ಳತನದ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿವೆ ಎನ್ನಲಾಗಿದೆ. ಈ ಕುರಿತು ನಗರಸಭೆಯವರು ಪೊಲೀಸರಿಗೆ ದೂರು ನೀಡಿದ್ದರೂ, ಪ್ರಕರಣದಲ್ಲಿ ಅಧಿಕಾರಿಗಳ ಪಾತ್ರದ ಬಗ್ಗೆಯೂ ಅನುಮಾನಗಳಿವೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ತ್ಯಾಜ್ಯ ನಿರ್ವಹಣಾ ಘಟಕದ ಉಸ್ತುವಾರಿ ವಹಿಸಿಕೊಂಡಿರುವ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಗುತ್ತಿಗೆದಾರರೊಂದಿಗಿನ ಶಾಮೀಲಿನಿಂದ ಅವ್ಯವಹಾರಗಳಿಗೆ ಅವಕಾಶವಾಗಿದೆ ಎಂದು ಆರೋಪಿಸಿರುವ ಅವರು, ಕಳ್ಳತನ ಪ್ರಕರಣದಲ್ಲಿ ಭಾಗಿಯಾದವರಷ್ಟೇ ಅಲ್ಲದೆ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ಧವೂ ತನಿಖೆ ನಡೆಸಿ ಅಮಾನತು ಸೇರಿದಂತೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಅಲ್ಲದೆ, ಘಟಕಕ್ಕೆ ಮಂಜೂರಾಗಿರುವ ವಿವಿಧ ಟೆಂಡರ್ಗಳು, ಕಸ ವಿಲೇವಾರಿ ಮತ್ತು ವಿಂಗಡಣೆ ಪ್ರಕ್ರಿಯೆ, ಗೊಬ್ಬರ ಉತ್ಪಾದನೆ ಹಾಗೂ ಗುಜರಿ ವಸ್ತುಗಳ ಮಾರಾಟದ ಸಂಪೂರ್ಣ ಲೆಕ್ಕಪರಿಶೋಧನೆ ನಡೆಸಿ, ಈವರೆಗಿನ ಚಟುವಟಿಕೆಗಳ ವಿವರಗಳನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
