ಸಾಗರ–ಹೊನ್ನಾವರ ರಸ್ತೆಯಲ್ಲಿ ಟೆಂಪೋ ಪಲ್ಟಿ; ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಮಾರುತಿ ನಾಯ್ಕ ಸಾವು
ಹೊನ್ನಾವರ: ಟೆಂಪೋ ಮತ್ತು ಸ್ಕೂಟಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸ್ಕೂಟಿ ಸವಾರ ಮೃತಪಟ್ಟ ಘಟನೆ ತಾಲೂಕಿನ ಕವಲಕ್ಕಿ ಗ್ರಾಮದ ಸಮೀಪ ಸಾಗರ–ಹೊನ್ನಾವರ ರಸ್ತೆಯಲ್ಲಿ ನಡೆದಿದೆ. ಹಾಡಿನಗೇರಿ ಮೂಲದ ಮಾರುತಿ ನಾಯ್ಕ (Maruti Naik) ಮೃತಪಟ್ಟ ದುರ್ದೈವಿ.
ಸಾಗರ ಕಡೆಯಿಂದ ಹೊನ್ನಾವರದತ್ತ ಬರುತ್ತಿದ್ದ ಟೆಂಪೋ ಕವಲಕ್ಕಿ ಸಮೀಪ ತಲುಪುತ್ತಿದ್ದಂತೆ ಸ್ಕೂಟಿಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಟೆಂಪೋ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಪಲ್ಟಿಯಾಗಿದೆ. ಟೆಂಪೋ ಚಾಲಕನ ಅತಿವೇಗ ಹಾಗೂ ಅಜಾಗರೂಕ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಅಪಘಾತದ ರಭಸಕ್ಕೆ ಸ್ಕೂಟಿ ಸವಾರ ಮಾರುತಿ ನಾಯ್ಕ ಗಂಭೀರವಾಗಿ ಗಾಯಗೊಂಡಿದ್ದರು. ಸ್ಥಳೀಯರು ತಕ್ಷಣ ನೆರವಿಗೆ ಧಾವಿಸಿ ಅವರನ್ನು ಆಸ್ಪತ್ರೆಗೆ ಸಾಗಿಸಲು ವ್ಯವಸ್ಥೆ ಮಾಡಿದರು. ಆದರೆ ತೀವ್ರ ರಕ್ತಸ್ರಾವದಿಂದಾಗಿ ಹೊನ್ನಾವರ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆಯೇ ಅವರು ಮೃತಪಟ್ಟಿದ್ದಾರೆ. ಪಲ್ಟಿಯಾದ ಟೆಂಪೋದ ಚಾಲಕನಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಹೊನ್ನಾವರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತಕ್ಕೆ ನಿಖರ ಕಾರಣ ತಿಳಿಯಲು ತನಿಖೆ ಮುಂದುವರಿಸಿದ್ದಾರೆ.
