ದಾಂಡೇಲಿ : ರೈಲ್ವೆ ಅಂಡರ್ ಬ್ರಿಡ್ಜ್ ಕಾಮಗಾರಿಯ ವೇಳೆ ಮಣ್ಣು ಕುಸಿದು ರೈಲ್ವೆ ಇಲಾಖೆಯ ತಾಂತ್ರಿಕ ಉದ್ಯೋಗಿಯೊಬ್ಬರು ಸ್ಥಳದಲ್ಲೆ ಸಾವನ್ನಪ್ಪಿ, ಇನ್ನೋರ್ವ ಗಾಯಗೊಂಡಿರುವ ಘಟನೆ ದಾಂಡೇಲಿ ತಾಲೂಕಿನ ಬರ್ಚಿ – ಕರ್ಕಾ ರಸ್ತೆಯ ಬೇಡರ ಶಿರಗೂರು ಹತ್ತಿರ ಗುರುವಾರ ರಾತ್ರಿ ನಡೆದಿದೆ.
ಅಳ್ನಾವರ-ಅಂಬೇವಾಡಿ ಸೆಕ್ಷನ್ನ ಎಲ್ಸಿ ನಂ.11 ರಲ್ಲಿ ದಾಂಡೇಲಿ ತಾಲೂಕಿನ ಕರ್ಕಾ – ಬರ್ಚಿ ರೈಲ್ವೆ ಮಾರ್ಗದಲ್ಲಿ ಅಂಡರ್ ಬ್ರಿಡ್ಜ್ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ನಡೆಯುತ್ತಿರುವ ಸಂದರ್ಭದಲ್ಲಿ ತೆಗೆದು ಹಾಕಿದ್ದ ಮಣ್ಣು ಕುಸಿದಿದೆ. ಈ ಸಂದರ್ಭದಲ್ಲಿ ಅಲ್ಲೇ ಕೆಲಸ ನಿರ್ವಹಿಸುತ್ತಿದ್ದ ರೈಲ್ವೆ ಇಲಾಖೆಯ ತಾಂತ್ರಿಕ ಸಿಬ್ಬಂದಿ ಹಾಗೂ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಜಾಲವಾಡಗಿ ಗ್ರಾಮದ ನಿವಾಸಿ ಮಹೇಶ ಶೇಖಪ್ಪ ತಳವಾರ ( ವ.33) ಅವರ ಮೇಲೆ ಮಣ್ಣು ಆಕಸ್ಮಿಕವಾಗಿ ಬಿದ್ದ ಪರಿಣಾಮವಾಗಿ ಮಣ್ಣಿನಲ್ಲಿ ಸಿಲುಕಿ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಸ್ಥಳದಲ್ಲಿದ್ದ ರೈಲ್ವೆ ಇಲಾಖೆಯ ಹಿರಿಯ ಸೆಕ್ಷನ್ ಅಭಿಯಂತರ ಹಾಗೂ ಗದಗ ರಾಜೀವ್ ಗಾಂಧಿನಗರದ ನಿವಾಸಿಯಾಗಿರುವ ಮಕ್ತುಂ ಹುಸೇನ್ ಮಹಮ್ಮದ್ ಹುಸೇನ್ ಮುಲ್ಲಾ ( ವ.57) ಎಂಬವರಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಸಿಪಿಐ ಶಿವಾನಂದ ಅಂಬಿಗೇರ್ ಹಾಗೂ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ. ಸುದ್ದಿ ತಿಳಿದು ರೈಲ್ವೆ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.
