ಹೆಚ್ಚುವರಿ ₹248 ದರದ ಕುರಿತು ಕಾರ್ಖಾನೆಯಿಂದ ಅಧಿಕೃತ ಆದೇಶ ತರಲು ಸವಾಲು
ಹಳಿಯಾಳ: ಕಬ್ಬು ಬೆಳೆಗಾರರ ಮುಖಂಡರೆಂದು ಹೇಳಿಕೊಳ್ಳುವ ಮೂವರ ನಡೆಗಳಿಂದ ಕ್ಷೇತ್ರದ ಕಬ್ಬು ಬೆಳೆಯುವ ರೈತರಿಗೆ ದರ ನಿಗದಿಯಲ್ಲಿ ಅನ್ಯಾಯವಾಗಿದ್ದು, ಪ್ರಾಮಾಣಿಕವಾಗಿ ಹೋರಾಟ ನಡೆಸುತ್ತಿರುವ ರೈತ ಸಂಘಟನೆಗೂ ಕೆಟ್ಟ ಹೆಸರು ಬರುತ್ತಿದೆ ಎಂದು ಮಾಜಿ ಶಾಸಕ ಸುನೀಲ ಹೆಗಡೆ ಆರೋಪಿಸಿದರು.
ಗುರುವಾರ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ಕಬ್ಬಿನ ದರ ನಿಗದಿ ಕುರಿತ ಸಭೆ ಮುಕ್ತಾಯಗೊಳ್ಳುವ ಮುನ್ನವೇ ಕಬ್ಬು ಬೆಳೆಗಾರರ ಹಿತಸಂರಕ್ಷಣಾ ಸಮಿತಿ ಅಧ್ಯಕ್ಷ ನಾಗೇಂದ್ರ ಜಿವೋಜಿ ಕಟಾವಿಗೆ ಸೂಚನೆ ನೀಡಿದ್ದರು. ಇದರಿಂದ ಸ್ಥಳೀಯ ರೈತರು ಪ್ರತಿ ಟನ್ಗೆ ರೂ. 3,600 ದರಕ್ಕೆ ತೃಪ್ತಿಪಡುವಂತಾಗಿದೆ ಎಂದು ದೂರಿದರು.
ದರ ನಿಗದಿಗೂ ಮುನ್ನ ಕಟಾವು ನಡೆಸಿದ ಕೆಲಸಗಾರರ ವಿರುದ್ಧ ಪ್ರಕರಣ ದಾಖಲಿಸಲು ರೈತರು ಮುಂದಾದಾಗ, ಜಿವೋಜಿ ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡಿ ಪ್ರಕರಣ ದಾಖಲಿಸದಂತೆ ಒತ್ತಡ ಹೇರಿದ್ದಾರೆ ಎಂದು ಆರೋಪಿಸಿದರು.
ದರದ ಬಗ್ಗೆ ರೈತರು ಆಕ್ಷೇಪಿಸಿದ ಬಳಿಕ ನಾಗೇಂದ್ರ ಜಿವೋಜಿ, ಶಂಕರ ಕಾಜಗಾರ ಹಾಗೂ ಸುರೇಶ ಶಿವಣ್ಣವರ ವಿಡಿಯೋ ಮೂಲಕ ಪ್ರತಿ ಟನ್ಗೆ ಹೆಚ್ಚುವರಿ ರೂ. 248 ದೊರೆಯಲಿದೆ ಎಂದು ಸಮಜಾಯಿಷಿ ನೀಡಿದ್ದಾರೆ. ಹೆಚ್ಚುವರಿ ದರ ಕೊಡಿಸುವ ಸಾಮರ್ಥ್ಯವಿದ್ದರೆ ಕಾರ್ಖಾನೆ ಆಡಳಿತ ಮಂಡಳಿಯಿಂದ ಅಧಿಕೃತ ಆದೇಶ ಹೊರಡಿಸಲಿ ಎಂದು ಸವಾಲು ಹಾಕಿದರು. ಕಬ್ಬು ಬೆಳೆಗಾರರ ನ್ಯಾಯಯುತ ಹೋರಾಟಕ್ಕೆ ಯಾವತ್ತೂ ಬಿಜೆಪಿ ಪಕ್ಷವು ರಾಜಕೀಯ ಪಕ್ಷವಾಗಿ ಬೆಂಬಲ ನೀಡುತ್ತಾ ಬಂದಿದ್ದು ನಮ್ಮ ರೈತಪರ ನಿಲುವಿನ ಬಗ್ಗೆ ಪ್ರಶ್ನಿಸುವ ನೈತಿಕತೆ ಅವರಿಗಿಲ್ಲ ಎಂದು ಗುಡುಗಿದರು.
ರಾಜ್ಯದಲ್ಲಿ ದರ ನಿಗದಿಗೂ ಮುನ್ನವೇ ಹಳಿಯಾಳದಲ್ಲಿ ಸಭೆ ನಡೆಸುವಂತೆ ಜಿಲ್ಲಾಧಿಕಾರಿಗಳ ಮೇಲೆ ಒತ್ತಡ ಹೇರಲಾಗಿತ್ತು. ಆದರೆ ಜಿಲ್ಲಾಧಿಕಾರಿಗಳು ಅಧಿಕೃತ ಸಭೆ ನಡೆಸದೆ ರೈತರೊಂದಿಗೆ ಮಾತುಕತೆ ನಡೆಸಿ ತೆರಳಿದ್ದಾರೆ ಎಂದು ಹೆಗಡೆ ಆಕ್ಷೇಪಿಸಿದರು.
ಕಬ್ಬು ಕಟಾವು ಕೆಲಸಗಾರರು ರೈತರಿಂದ ಹೆಚ್ಚುವರಿಯಾಗಿ ಪಡೆಯುವ ಹಣವನ್ನು ‘ಲಗಾನಿ’ ಎಂದು ಕರೆಯಲಾಗುತ್ತದೆ. ಇದೇ ರೀತಿಯಲ್ಲಿ ಈ ಮೂವರು ಮುಖಂಡರು ಕಾರ್ಖಾನೆಯಿಂದ ‘ಲಗಾನಿ’ ಪಡೆದಿರುವ ಮಾಹಿತಿ ತಮಗಿದೆ ಎಂದು ಅವರು ಗಂಭೀರ ಆರೋಪ ಮಾಡಿದರು.
ಕುಮಾರ ಬೊಬಾಟಿ, ಅಶೋಕ ಮೇಟಿ, ಬಾಬು ಘಾಡಿ, ಸಾತುರಿ ಗೋಡಿಮನಿ ಸೇರಿದಂತೆ ಹಲವರು ರೈತರ ಹಿತಕ್ಕಾಗಿ ಪ್ರಾಮಾಣಿಕ ಹೋರಾಟ ನಡೆಸಿದ್ದಾರೆ. ಸಂಘಟನೆಗೆ ಕೆಟ್ಟ ಹೆಸರು ತರುವವರನ್ನು ಹೊರಗಿಟ್ಟು, ತಾಲೂಕಿನಲ್ಲಿ ರೈತ ಸಂಘಟನೆಯನ್ನು ಇನ್ನಷ್ಟು ಬಲಪಡಿಸಬೇಕು ಎಂದು ಆಗ್ರಹಿಸಿದರು.
ನೀರಲಗಾ ಗ್ರಾಮದ ರೈತ ಶಿವಾಜಿ ಕೋಳೆಕಾರ ಮಾತನಾಡಿ, ಪ್ಯಾರಿ ಸಕ್ಕರೆ ಕಾರ್ಖಾನೆಯ ಬಾಕಿ ಹಣಕ್ಕೆ ಸಂಬಂಧಿಸಿದ ನ್ಯಾಯಾಲಯದ ಪ್ರಕರಣದಲ್ಲಿ ನ್ಯಾಯ ಕೊಡಿಸುವುದಾಗಿ ಜಿವೋಜಿ ರೈತರಿಂದ ಹಣ ಸಂಗ್ರಹಿಸಿದ್ದಾರೆ ಎಂದು ಆರೋಪಿಸಿದರು. ಸಂಗ್ರಹಿಸಿದ ಹಣದ ಲೆಕ್ಕವನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ವಿಠ್ಠಲ ಸಿದ್ದಣ್ಣವರ, ಪ್ರಧಾನ ಕಾರ್ಯದರ್ಶಿ ಸಂತೋಷ ಘಟಕಾಂಬ್ಳೆ, ಸೋನಪ್ಪ ಸುಣಕಾರ, ಬಸಣ್ಣ ಕುರಬಗಟ್ಟಿ, ಜ್ಞಾನೇಶ ಮಾನಗೆ, ಹನುಮಂತ ಚಿನಗಿನಕೊಪ್ಪ, ಶಿವಾಜಿ ಪಾಟೀಲ, ಹನುಮಂತ ಛಲವಾದಿ, ಉದಯ ಜಾದವ್, ಮಹೇಶ ಮೇಗಾನಿ ಮತ್ತಿತರರು ಉಪಸ್ಥಿತರಿದ್ದರು.
