ಕಾರವಾರ: ಮನೆಯಲ್ಲಿ ಅಕ್ರಮವಾಗಿ ಗೋವಾ ಮದ್ಯ ಹಾಗೂ ಬಿಯರ್ ಸಂಗ್ರಹಿಸಿಟ್ಟು ಮಾರಾಟಕ್ಕೆ ಸಿದ್ಧತೆ ನಡೆಸಿದ್ದ ಪ್ರಕರಣವನ್ನು ಅಬಕಾರಿ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ತಾಲೂಕಿನ ಹೋಟೆಗಾಳಿ ಗ್ರಾಮದಲ್ಲಿ ನಡೆಸಿದ ದಾಳಿಯಲ್ಲಿ ₹42,500 ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದ್ದು, ಮನೆಯ ಮಾಲೀಕನ ಪತ್ತೆಗಾಗಿ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.
ಅಬಕಾರಿ ಜಂಟಿ ಆಯುಕ್ತರು (ಜಾರಿ ಮತ್ತು ತನಿಖೆ), ಮಂಗಳೂರು ವಿಭಾಗದ ನಿರ್ದೇಶನ ಹಾಗೂ ಉತ್ತರ ಕನ್ನಡ ಜಿಲ್ಲಾ ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದಲ್ಲಿ ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ.
ಹೋಟೆಗಾಳಿ ಗ್ರಾಮದ ವಿಜಯ ಪಡುವಳಕರ ಎಂಬುವರಿಗೆ ಸೇರಿದ ಮನೆಯಲ್ಲಿ ಶೋಧ ನಡೆಸಿದಾಗ, ಅಕ್ರಮ ಮಾರಾಟದ ಉದ್ದೇಶದಿಂದ ಸಂಗ್ರಹಿಸಿಟ್ಟಿದ್ದ 34.500 ಲೀಟರ್ ಗೋವಾ ಮದ್ಯ ಹಾಗೂ 65 ಲೀಟರ್ ಗೋವಾ ಬಿಯರ್ ಪತ್ತೆಯಾಗಿದೆ. ಒಟ್ಟು 99.500 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದ್ದು, ಇದರ ಅಂದಾಜು ಮೌಲ್ಯ ₹42,500 ಎಂದು ಅಬಕಾರಿ ಇಲಾಖೆ ತಿಳಿಸಿದೆ.
ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ಮನೆಯ ಮಾಲೀಕ ವಿಜಯ ಪಡುವಳಕರ ಸ್ಥಳದಲ್ಲಿ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಅವರ ಪತ್ತೆ ಹಾಗೂ ಬಂಧನಕ್ಕೆ ಅಬಕಾರಿ ಇಲಾಖೆ ಮುಂದಾಗಿದೆ.
ಈ ಕುರಿತು ಅಬಕಾರಿ ನಿರೀಕ್ಷಕಿ ಸುನೀತಾ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಬಕಾರಿ ಉಪನಿರೀಕ್ಷಕ ಶಿವಶಂಕರ ಯು., ಅಬಕಾರಿ ಪೇದೆ ನವೀನ್ ನಾಯಕ್ ಬಿ. ಹಾಗೂ ವಾಹನ ಚಾಲಕ ಬಾಲಚಂದ್ರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
