ಕಾರವಾರ:
ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆಯುತ್ತಿರುವ ಕರಾವಳಿ ಉತ್ಸವಕ್ಕೆ ಭಾನುವಾರ ರಾತ್ರಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಗಮಿಸಿದರು.
ಡಿಸಿಎಂ ಅವರಿಗೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್.ವೈದ್ಯ ಸಾಥ್ ನೀಡಿದರು. ಈ ಸಂದರ್ಭದಲ್ಲಿ ಶಾಸಕರಾದ ಭೀಮಣ್ಣ ನಾಯ್ಕ ಹಾಗೂ ಸತೀಶ್ ಸೈಲ್ ಉಪಸ್ಥಿತರಿದ್ದರು. ಡಿಸಿಎಂ ಭೇಟಿಗಾಗಿ ಬಿಜೆಪಿ ಉಚ್ಚಾಟಿತ ಶಾಸಕ ಶಿವರಾಮ್ ಹೆಬ್ಬಾರ್ ಕೂಡ ಆಗಮಿಸಿದರು.
ಕಾರವಾರದ ಎಂಸಿಎ ಅಧ್ಯಕ್ಷ ಸತೀಶ್ ಸೈಲ್ ಅವರ ಕಚೇರಿಗೆ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ಶಾಸಕರೊಂದಿಗೆ ಚರ್ಚೆ ನಡೆಸಿದರು. ಬಳಿಕ ವೇದಿಕೆ ಕಾರ್ಯಕ್ರಮಕ್ಕೆ ತೆರಳಲಿರುವುದಾಗಿ ತಿಳಿದುಬಂದಿದೆ.
ಇದಕ್ಕೂ ಮುನ್ನ ಡಿಸಿಎಂ ಕಾರವಾರ ನಗರದ ಸುಭಾಷ್ ವೃತ್ತದಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಡಿಸಿಎಂ ಆಗಮಿಸುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗಿ ಭರ್ಜರಿ ಸ್ವಾಗತ ಕೋರಿದರು.
ಗೋವಾ ಮೂಲಕ ಕಾರವಾರಕ್ಕೆ ಆಗಮಿಸಿದ ಡಿಸಿಎಂ ಅವರನ್ನು ಗೋವಾ ಗಡಿಯಲ್ಲಿಯೇ ಕಾಂಗ್ರೆಸ್ ಕಾರ್ಯಕರ್ತರು ಸ್ವಾಗತಿಸಿಕೊಂಡರು.
