ಕಾರವಾರ:
“ದೇವರು ಯಾರಿಗೂ ವರವನ್ನು ಕೊಡುವುದಿಲ್ಲ, ಹಾಗೆಯೇ ಶಾಪವನ್ನೂ ಕೊಡುವುದಿಲ್ಲ. ಆತ ಕೇವಲ ಅವಕಾಶಗಳನ್ನು ಮಾತ್ರ ನೀಡುತ್ತಾನೆ. ಸಿಕ್ಕ ಅವಕಾಶವನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎನ್ನುವುದು ಮುಖ್ಯ” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾರ್ಮಿಕವಾಗಿ ನುಡಿದರು.
ನಗರದಲ್ಲಿ ಭಾನುವಾರ ವಿಜೃಂಭಣೆಯಿಂದ ನಡೆದ ‘ಕರಾವಳಿ ಉತ್ಸವ-2025’ರ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ತಮಗೆ ಎಷ್ಟೇ ಕೆಲಸದ ಒತ್ತಡವಿದ್ದರೂ, ನೀಡಿದ ಮಾತಿನಂತೆ ಉತ್ಸವದ ಕಡೆಯ ದಿನದಂದು ಆಗಮಿಸಿದ್ದೇನೆ. ಈ ಜನಸಾಗರವನ್ನು ನೋಡುತ್ತಿದ್ದರೆ ಪುರಂದರ ದಾಸರ “ಇದು ಭಾಗ್ಯ, ಇದು ಭಾಗ್ಯ, ಇದು ಭಾಗ್ಯವಯ್ಯ” ಎಂಬ ಸಾಲುಗಳು ನೆನಪಾಗುತ್ತವೆ. ಸಮುದ್ರವೇ ಒಂದು ದೊಡ್ಡ ಶಕ್ತಿ. ಕಳೆದ ಏಳು ವರ್ಷಗಳಿಂದ ನಿಂತುಹೋಗಿದ್ದ ಈ ಉತ್ಸವವನ್ನು, ತಮಗೆ ಸಿಕ್ಕ ಅವಕಾಶದಲ್ಲಿ ಶಾಸಕ ಸತೀಶ್ ಸೈಲ್ ಅವರು ಅತ್ಯಂತ ಯಶಸ್ವಿಯಾಗಿ ಮತ್ತು ಅಚ್ಚುಕಟ್ಟಾಗಿ ನಡೆಸಿಕೊಟ್ಟಿದ್ದಾರೆ ಎಂದು ಡಿಸಿಎಂ ಶ್ಲಾಘಿಸಿದರು.
ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಮಾತನಾಡಿದ ಡಿಕೆಶಿ, ಕರಾವಳಿ ಮತ್ತು ಮಲೆನಾಡು ಭಾಗಕ್ಕೆ ಪ್ರತ್ಯೇಕ ಪ್ರವಾಸೋದ್ಯಮ ನೀತಿಯನ್ನು ರೂಪಿಸಲು ಸರ್ಕಾರ ನಿರ್ಧರಿಸಿದೆ ಎಂದರು. ಇಲ್ಲಿನ ಯುವಕರು ಉದ್ಯೋಗ ಅರಸಿ ಮುಂಬೈ, ಬೆಂಗಳೂರು ಅಥವಾ ಗಲ್ಫ್ ರಾಷ್ಟ್ರಗಳಿಗೆ ವಲಸೆ ಹೋಗುವುದನ್ನು ತಪ್ಪಿಸಬೇಕಿದೆ. ಈ ನಿಟ್ಟಿನಲ್ಲಿ ಜನವರಿ 10ರಂದು ಮಂಗಳೂರಿನಲ್ಲಿ ಮಹತ್ವದ ಸಭೆ ಕರೆಯಲಾಗಿದೆ ಎಂದು ಮಾಹಿತಿ ನೀಡಿದರು. ಇದೇ ವೇಳೆ, ಶಾಸಕ ಶಿವರಾಮ್ ಹೆಬ್ಬಾರ್ ಪ್ರಸ್ತಾಪಿಸಿದ ನದಿ ಜೋಡಣೆ ಯೋಜನೆಗೆ ಸಂಬಂಧಿಸಿದಂತೆ, ಈಗಾಗಲೇ ದೆಹಲಿಯಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದರು.
ರಾಜಕೀಯದ ಕುರಿತು ಮಾತನಾಡಿದ ಅವರು, “ಸಮಸ್ಯೆಗಳಲ್ಲಿಯೇ ನಾಯಕರು ಬೆಳೆಯುತ್ತಾರೆ. ನೀವು ಕಳೆದ ಬಾರಿ ಈ ಜಿಲ್ಲೆಯಿಂದ ಐವರು ಶಾಸಕರನ್ನು ಕಾಂಗ್ರೆಸ್ ಪರ ಕೊಟ್ಟಿದ್ದೀರಿ. ಮುಂದಿನ ದಿನಗಳಲ್ಲಿ ಐದಲ್ಲ, ಆರು ಶಾಸಕರನ್ನು ಆರಿಸಿ ಕಳುಹಿಸುವ ಮೂಲಕ ನಮ್ಮ ಕೈ ಬಲಪಡಿಸಬೇಕು” ಎಂದು ಮನವಿ ಮಾಡಿದರು. ಜಿಲ್ಲೆಗೆ ಅತ್ಯಗತ್ಯವಾಗಿರುವ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಇದೇ ವೇಳೆ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಶಾಸಕರಾದ ಭೀಮಣ್ಣ ನಾಯ್ಕ, ಸತೀಶ್ ಸೈಲ್, ಶಿವರಾಮ್ ಹೆಬ್ಬಾರ್, ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಹಾಗೂ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಶಾಸಕ ಸತೀಶ್ ಸೈಲ್ ಶ್ರೀಗಂಧದ ವಿಷ್ಣುವಿನ ದಶಾವತಾರದ ಮೂರ್ತಿಯನ್ನು ನೀಡಿ ವಿಶೇಷವಾಗಿ ಸನ್ಮಾನಿಸಿದರು.
