ಕಾರವಾರ:
ಕರ್ನಾಟಕದಲ್ಲಿ ಚುನಾವಣಾ ಆಯೋಗದಿಂದ ಎಸ್ಐಆರ್(ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ) ಘೋಷಣೆಯಾಗಿಲ್ಲ, ಆದರೂ ತಹಸೀಲ್ದಾರ್ ಅವರು ಮತದಾರರ ಪಟ್ಟಿ ಮ್ಯಾಪಿಂಗ್ ಕಾರ್ಯ ನಡೆಸಲು ಪ್ರಕಟಣೆ ನೀಡಿದ್ದು ಸರಿಯಲ್ಲ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ಶಂಭು ಶೆಟ್ಟಿ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಈ ಹಿಂದೆ ಜಿಲ್ಲಾಧಿಕಾರಿ ಅವರು ರಾಷ್ಟ್ರೀಯ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಿದ್ದರು. ಸಭೆಯಲ್ಲಿ ಮತದಾರರ ಪಟ್ಟಿ ಮ್ಯಾಪಿಂಗ್ ಮಾಡುವ ಬಗ್ಗೆ ಚರ್ಚೆಯಾಗಿಲ್ಲ. ಇದೀಗ ಇದ್ದಕ್ಕಿದಂತೆ ತಹಸೀಲ್ದಾರರರು 2002ರ ಮತದಾರರ ಪಟ್ಟಿಯೊಂದಿಗೆ 2024ರ ಮತದಾರರ ಪಟ್ಟಿಯನ್ನು ಮ್ಯಾಪಿಂಗ್ಗೆ ಆದೇಶ ನೀಡಿದ್ದು ಸರಿಯಲ್ಲ. ಈ ಪ್ರಕ್ರಿಯೆಯಲ್ಲಿ ತಾಂತ್ರಿಕ ಸಮಸ್ಯೆಗಳಿದ್ದು, 2024ರ ಮತದಾರರ ಪಟ್ಟಿಯಲ್ಲಿದ್ದು, 2002ರ ಮತದಾರರ ಪಟ್ಟಿಯಲ್ಲಿಲ್ಲದವರು ಕೇಳಿದ ದಾಖಲೆಗಳನ್ನು ನೀಡುವುದು ಸಾಧ್ಯವಿಲ್ಲವಾಗಿದೆ. ಇದರಿಂದ ಮತದಾನದ ಹಕ್ಕು ಕಳೆದುಕೊಳ್ಳುವ ಸಾಧ್ಯತೆಗಳಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮ್ಯಾಪಿಂಗ್ ಮೂಲಕ ಸಿದ್ಧಪಡಿಸುವ ಮತದಾರರ ಪಟ್ಟಿಯಿಂದ ಅಕ್ರಮಗಳು ನಡೆಯುವ ಸಾಧ್ಯತೆಗಳಿವೆ. ದೇಶದಲ್ಲಿ ಏಕಕಾಲದಲ್ಲಿ ಎಸ್ಐಆರ್ ಪಟ್ಟಿ ಹೊರಬಂದರೆ ಎಲ್ಲರ ಹೆಸರು ಸಿಗುತ್ತದೆ. ಆದರೆ ರಾಜ್ಯವಾರು ಮಾಡಿದರೆ ಇದು ಸಾಧ್ಯವಿಲ್ಲ. ಪರಿಷ್ಕರಣೆಯಲ್ಲಿ ರಾಜಕೀಯ ಪಕ್ಷದ ಬಿಎಲ್ಎ(ಬೂತ್ ಮಟ್ಟದ ಸಹಾಯಕ)ಗಳನ್ನು ಗಣನೆಗೆ ತೆಗೆದುಕೊಂಡಿಲ್ಲ. ಇದು ಅನುಮಾನಕ್ಕೆ ಕಾರಣವಾಗಿದೆ. ರಾಜಕೀಯ ಪಕ್ಷಗಳನ್ನು ಬದಿಗಿಟ್ಟು, ಚುನಾವಣಾ ಆಯೋಗ ಈ ರೀತಿ ಮಾಡುತ್ತಿರುವುದು ಮತಗಳ್ಳತನಕ್ಕೆ ರಹದಾರಿಯಾಗಲಿದೆ ಎಂದರು. ಚುನಾವಣಾ ವಿಚಾರದಲ್ಲಿ ಡಿಸಿ, ಎಸಿ, ತಹಸೀಲ್ದಾರ್ಗಳು ಸರಕಾರದ ಅಡಿಯಲ್ಲಿ ಬರುವುದಿಲ್ಲ, ಚುನಾವಣಾ ಆಯೋಗದ ಅಡಿಯಲ್ಲಿ ಬರುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಅರವಿಂದ ಕಲ್ಗುಟ್ಕರ, ಜಿಪಿ ನಾಯ್ಕ, ಗ್ಯಾರಂಟಿ ಪ್ರಾಧಿಕಾರದ ತಾಲೂಕು ಅಧ್ಯಕ್ಷ ರಾಜೇಂದ್ರ ರಾಣೆ, ಮಾರುತಿ ನಾಯ್ಕ, ಗಣಪತಿ ಕುಡ್ತಲಕರ, ಮಚ್ಚೇಂದ್ರ ಮಹಾಲೆ, ಸೂರಜ ಕೂರಮಕರ ಹಾಗೂ ಇತರರು ಇದ್ದರು.
