ದಾಂಡೇಲಿ:
ನಗರಸಭೆ ವ್ಯಾಪ್ತಿಯಲ್ಲಿ ಬರುವ ದಾಂಡೇಲಿ ನಗರದ ಹಲವು ಪ್ರದೇಶಗಳ ನಿವೇಶನಗಳಲ್ಲಿ ಕೆಲವು ವಸತಿ ರಹಿತರು ವಾಸಕ್ಕಾಗಿ ಮನೆ ನಿರ್ಮಿಸಿಕೊಂಡಿರುತ್ತಾರೆ. ಕೆಲ ಪ್ರದೇಶ ಹೊರತುಪಡಿಸಿದರೆ ಇಡೀ ನಗರವೇ ಅತಿಕ್ರಮಣದಿಂದ ನಿರ್ಮಾಣವಾದಂತಿದೆ. ಆದರೆ ವಸತಿ ರಹಿತರಿಗೆ ವಸತಿ ಹಕ್ಕು ದೊರೆಯಬೇಕಿರುವುದು ಕೂಡ ಸಂವಿಧಾನದತ್ತ ಬದುಕುವ ಹಕ್ಕಿನ ಭಾಗವೇ ಆಗಿದ್ದು ಈ ಸದರಿ ಮನೆಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ನಗರ ಸಭೆಯಿಂದ ನಿರಪೇಕ್ಷಣ ಪತ್ರ ಅತ್ಯಗ್ಯವಾಗಿದೆ. ನಗರಾಡಳಿತವು ಅರ್ಜಿದಾರರಿಗೆ ನಿರಪೇಕ್ಷಣ ಪತ್ರ ನೀಡುವುದನ್ನು ನಿರಾಕರಿಸುತ್ತಿದ್ದು ಹೊಸ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕಕ್ಕೆ ನಿರಪೇಕ್ಷಣ ಪತ್ರ ಒದಗಿಸಿ ಕೊಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಡಿ.ವೈ.ಎಫ.ಐ ರಾಜ್ಯ ಸಮಿತಿ ಸದಸ್ಯ ಡಿ.ಸ್ಯಾಮಸನ್ ಲಿಖಿತ ಮನವಿ ಸಲ್ಲಿಸಿದ್ದಾರೆ.
ವಾಸಿಸಲು ಯಾವುದೇ ಸೌಲಭ್ಯವಿಲ್ಲದ ಬಡ ಜನತೆ ದುರಸ್ಥಿ ಕಟ್ಟಡ ಮಾಡಿಕೊಂಡಿರುವವರು ಇದ್ದುದರಿಂದ ದೈನಂದಿನ ಬದುಕಿಗೆ ದುಡಿಯುವ ಕೂಲಿ ಕೆಲಸ ಬಿಟ್ಟು ದಿನನಿತ್ಯ ನಗರಸಭೆಗೆ ಅಲೆದಾಡುತ್ತಿದ್ದಾರೆ. ನಗರಾಡಳಿತದ ಈ ನಿರ್ಲಕ್ಷದಿಂದ ಬಡಜನರು ಕತ್ತಲಲ್ಲಿ ಸಂಕಷ್ಟದ ಬದುಕು ನಡೆಸುತ್ತಿದ್ದಾರೆ. ಜನತೆಯ ಬದುಕುವ ಹಕ್ಕನ್ನು ಚ್ಯುತಿಗೊಳಿಸುವುದು ಸಹಿಸಲಸಾಧ್ಯವಾದುದು. ನಗರಸಭೆ ಆಡಳಿತವು ಈ ಪ್ರಕರಣವನ್ನು ಗಂಭೀರವಾಗಿ ಹಾಗೂ ವಿಶೇಷ ಪ್ರಕರಣವೆಂದು ಪರಿಗಣಿಸಿ ಕಾಲ ವಿಳಂಬ ಮಾಡದೇ ನಿಗದಿತ ಕಾಲಮಿತಿಯೊಳಗೆ ಆದ್ಯತೆಯ ಮೇರೆಗೆ ಅವಶ್ಯವಿರುವ ಮಾನದಂಡಗಳನ್ನ ವಿಧಿಸಿ ದುರಸ್ಥಿ ಕಟ್ಟಡ ನಿರ್ಮಿಸಿಕೊಂಡಿರುವ ವಸತಿ ರಹಿತ ದಾಂಡೇಲಿ ಜನರಿಗೆ ಅತ್ಯಗತ್ಯವಿರುವ ನಿರಪೇಕ್ಷಣ ಪತ್ರ ನೀಡಿ ಸಹಕರಿಸಬೇಕೆಂದು ಒತ್ತಾಯಿಸಿದ್ದಾರೆ.
