ಯಲ್ಲಾಪುರ:
ಯಲ್ಲಾಪುರ-ಮುಂಡಗೋಡು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ವಿ ಎಸ್ ಪಾಟೀಲ್ ಅವರ ರಕ್ಷಣೆಗಿದ್ದ ಬಂದೂಕು ಕಳ್ಳತನವಾಗಿದೆ. ಕಳ್ಳರು ಮನೆಗೆ ನುಗ್ಗಿ ಕದ್ದಿದ್ದಾರೆ ಎಂದು ತಿಳಿದು ಬಂದಿದೆ.
ವಿ.ಎಸ್ ಪಾಟೀಲ ಅವರು ತಮ್ಮ ರಕ್ಷಣೆಗಾಗಿ ಬಂದೂಕು ಪರವಾನಿಗೆ ಹೊಂದಿದ್ದರು. ಡಬಲ್ ಬ್ಯಾರಲ್ ಬಂದೂಕನ್ನು ಸಹ ವಿ ಎಸ್ ಪಾಟೀಲ್ ಅವರು ಖರೀದಿಸಿದ್ದರು. ಅದೇ ಬಂದೂಕು ಇದೀಗ ಕಳ್ಳತನವಾಗಿದೆ. ಮುಂಡಗೋಡಿನ ಅಂದಲಗಿಯಲ್ಲಿ ಅವರಿಗೆ 9 ಎಕರೆ ಕೃಷಿ ಭೂಮಿಹೊಂದಿದ್ದು, ಇಲ್ಲಿಯೇ ಇದ್ದಾರೆ. ಹೀಗಿರುವಾಗ ಅವರು ತಮ್ಮ ಸ್ವ ರಕ್ಷಣೆಗಾಗಿ ಹೊಂದಿದ್ದ ಬಂದೂಕನ್ನು ಕಳೆದುಕೊಂಡಿದ್ದಾರೆ.
ವಿ ಎಸ್ ಪಾಟೀಲ್ ಅವರು ತಮ್ಮ ಜಮೀನಿನಲ್ಲಿರುವ ಪಂಪ್ ಹೌಸಿನಲ್ಲಿ ಬಂದೂಕು ಇಡುತ್ತಿದ್ದರು. 2025ರ ಡಿಸೆಂಬರ್ 31ರ ಸಂಜೆ ಅವರು ಕೊನೆಯದಾಗಿ ಬಂದೂಕು ಬಳಸಿದ್ದರು. ಜನವರಿ 1ರ ಬೆಳಗ್ಗೆ 10 ಗಂಟೆ ಅವಧಿಗೆ ಬೋರಿನ ಮನೆ ಕಡೆ ಹೋದಾಗ ಅಲ್ಲಿ ಬಂದೂಕು ಕಾಣಲಿಲ್ಲ. 40 ಸಾವಿರ ರೂ ಮೌಲ್ಯದ ಡಬಲ್ ಬ್ಯಾರೆಲ್ ಬಂದೂಕು ಕಾಣದ ಕಾರಣ ಅವರು ಆತಂಕಕ್ಕೆ ಒಳಗಾದರು. ಅದಾಗಿಯೂ, ಎಲ್ಲಾ ಕಡೆ ಬಂದೂಕು ಹುಡುಕಾಟ ನಡೆಸಿದರು. ಕುಟುಂಬದವರು ಹಾಗೂ ಸಂಬಂಧಿಕರ ಬಳಿಯೂ ಚರ್ಚಿಸಿದರು. ಆದರೆ, ಯಾರೂ ಅವರ ಬಂದೂಕಿನ ಬಗ್ಗೆ ಸುಳಿವು ಕೊಡಲಿಲ್ಲ.
ಈ ಎಲ್ಲಾ ಹಿನ್ನಲೆ ವಿ ಎಸ್ ಪಾಟೀಲ ಅವರು ಮುಂಡಗೋಡು ಪೊಲೀಸ್ ಠಾಣೆಗೆ ಆಗಮಿಸಿದ್ದು, ಸ್ವ ರಕ್ಷಣೆಗಾಗಿಪಡೆದಿದ್ದ ಬಂದೂಕು ಕಳ್ಳತನದ ಬಗ್ಗೆ ಪೊಲೀಸರಿಗೆ ದೂರಿದರು. ಸದ್ಯ ಮುಂಡಗೋಡು ಪೊಲೀಸರು ಆ ಬಂದೂಕಿನ ಹುಡುಕಾಟ ನಡೆಸಿದ್ದಾರೆ.
