ಕಾರವಾರ:
ಬಹುನಿರೀಕ್ಷಿತ ಬಾಲಿವುಡ್ ಚಿತ್ರ ‘ಬಾರ್ಡರ್-2’ ಚಿತ್ರತಂಡವು ಬುಧವಾರ ಸಂಜೆ ಇಲ್ಲಿನ ಕದಂಬ ನೌಕಾನೆಲೆಗೆ ಭೇಟಿ ನೀಡಿ, ಭಾರತೀಯ ನೌಕಾಪಡೆಗೆ ವಿಶೇಷ ಗೌರವ ಸಲ್ಲಿಸಿತು. ಅತ್ಯಂತ ಗೌಪ್ಯವಾಗಿ ನಡೆದ ಈ ಕಾರ್ಯಕ್ರಮದ ತುಣುಕುಗಳನ್ನು ಚಿತ್ರತಂಡ ಸಾಮಾಜಿಕ ಜಾಲತಾಣ ‘X’ ನಲ್ಲಿ ಹಂಚಿಕೊಂಡ ಬಳಿಕವಷ್ಟೇ ಈ ವಿಚಾರ ತಡರಾತ್ರಿ ಬೆಳಕಿಗೆ ಬಂದಿದೆ.
ದೇಶದ ಮೊದಲ ಸ್ವದೇಶಿ ವಿಮಾನವಾಹಕ ಯುದ್ಧ ನೌಕೆ ಐಎನ್ಎಸ್ ವಿಕ್ರಾಂತ್ ಮೇಲೆ ನಡೆದ ಈ ವಿಶೇಷ ಕಾರ್ಯಕ್ರಮದಲ್ಲಿ ಚಿತ್ರದ ನಟರಾದ ಸನ್ನಿ ಡಿಯೋಲ್, ವರುಣ್ ಧವನ್, ದಿಲ್ಜಿತ್ ದೋಸಾಂಜ್ ಮತ್ತು ಅಹಾನ್ ಶೆಟ್ಟಿ ಭಾಗವಹಿಸಿದ್ದರು. ಚಿತ್ರತಂಡವು ನೌಕಾಪಡೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳೊಂದಿಗೆ ಸಂವಾದ ನಡೆಸುವ ಮೂಲಕ ಅವರ ಅಪ್ರತಿಮ ಸೇವೆ ಮತ್ತು ತ್ಯಾಗಕ್ಕೆ ಕೃತಜ್ಞತೆ ಸಲ್ಲಿಸಿತು. ಇದಕ್ಕೂ ಮುನ್ನ ತಂಡವು ಐಎನ್ಎಸ್ ವಿಕ್ರಮಾದಿತ್ಯ ನೌಕೆಗೂ ಭೇಟಿ ನೀಡಿತ್ತು.
ಈ ಸಮಾರಂಭದಲ್ಲಿ ಚಿತ್ರದ ಕೆಲವು ಹಾಡುಗಳನ್ನು ಪ್ರದರ್ಶಿಸಲಾಯಿತು ಮತ್ತು ನೌಕಾ ಸಿಬ್ಬಂದಿಗಳಿಗಾಗಿ ಚಿತ್ರದ ಟ್ರೇಲರ್ ಅನ್ನು ವಿಶೇಷವಾಗಿ ಪ್ರದರ್ಶಿಸಲಾಯಿತು.
ಈ ಚಿತ್ರದಲ್ಲಿ ನಟ ಅಹಾನ್ ಶೆಟ್ಟಿ ಅವರು ಧೈರ್ಯಶಾಲಿ ನೌಕಾ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ನಿರ್ಮಾಪಕರಾದ ಭೂಷಣ್ ಕುಮಾರ್, ಕೃಷನ್ ಕುಮಾರ್, ಜೆ.ಪಿ. ದತ್ತಾ, ನಿಧಿ ದತ್ತಾ ಹಾಗೂ ನಿರ್ದೇಶಕ ಅನುರಾಗ್ ಸಿಂಗ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ದೇಶಪ್ರೇಮ ಮತ್ತು ರಾಷ್ಟ್ರೀಯ ಭದ್ರತೆಯ ಮಹತ್ವ ಸಾರುವ ‘ಬಾರ್ಡರ್-2’ ಚಿತ್ರವು ಜನವರಿ 23, 2026 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಏಷ್ಯಾದ ಅತಿದೊಡ್ಡ ನೌಕಾನೆಲೆಯಲ್ಲಿ ನಡೆದ ಈ ಪ್ರಚಾರ ಕಾರ್ಯಕ್ರಮವು ಸಿನಿಮಾ ಮತ್ತು ರಕ್ಷಣಾ ವಲಯ ಎರಡರಲ್ಲೂ ಭಾರೀ ಕುತೂಹಲ ಮೂಡಿಸಿದೆ.
