ಕಾರವಾರ:
ತಾಲೂಕಿನ ಕದ್ರಾದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಯುವತಿ ರಿಶೆಲ್ ಕಿಸ್ತೋದ್ ಸಾವಿನಲ್ಲಿ ಅನುಮಾನವಿದ್ದು ಮರು ಮರಣೋತ್ತರ ಪರೀಕ್ಷೆ ನಡೆಸುವಂತೆ ಆಗ್ರಹಿಸಿ ಮಂಗಳವಾರ ಕಾರವಾರದ ಕ್ಯಾಥೋಲಿಕ್ ಧರ್ಮಪ್ರಾಂತ್ಯ ಮಹಿಳಾ ಘಟಕದಿಂದ ಬೃಹತ್ ಪ್ರತಿಭಟನೆ ನಡೆಯಿತು.
ಇಲ್ಲಿನ ಮಿತ್ರ ಸಮಾಜ ಮೈದಾನದಿಂದ ಆರಂಭಗೊಂಡ ಪ್ರತಿಭಟನೆಯಲ್ಲಿ ಎಲ್ಲಾ ಧರ್ಮದವರು ಭಾಗವಹಿಸಿದ್ದರು. ಸುಭಾಷ ವೃತ್ತದ ಮಾರ್ಗವಾಗಿ ಆರಂಭವಾದ ಪ್ರಭಟನಾ ಮೆರವಣಿಗೆಯು ಸವಿತಾವೃತ್ತ ಕೋಡಿಬಾಗ ರಸ್ತೆಯ ಮೂಲಕ ಜಿಲ್ಲಾಧಿಕಾರಿ ಕಚೇರಿಯನ್ನು ತಲಿಪಿತು. ಸುಮಾರು 500 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದ ಪ್ರತಿಭಟನೆಯಲ್ಲಿ ಮೃತ ರಿಶೆಲ್ ಸಾವಿಗೆ ನ್ಯಾಯ ಬೇಕು, ಆರೋಪಿಯ ಸೆರೆಯಾಗಬೇಕು, ಹಾಗೂ ಪೊಲೀಸ್ ತನಿಖೆ ಮತ್ತು ವೈದ್ಯರು ನಡೆಸಿದ ಮರಣೋತ್ತರ ಪರೀಕ್ಷೆಯಲ್ಲಿ ಲೋಪವಿದ್ದು ಶವದ ಮರು ಮರಣೋತ್ತರ ಪರೀಕ್ಷೆ ನಡೆಸಬೇಕು ಎನ್ನುವ ಆಗ್ರಹ ಕೇಳಿ ಬಂದವು.
ರಿಶೆಲ್ ಜ.9 ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದರ ಹಿಂದೆ ಜೆಡಿಎಸ್ ಮುಖಂಡೆ ಚೈತ್ರಾ ಕೊಟಾರಕರ ಅವರ ಪುತ್ರ ಚಿರಾಗ ಇದ್ದು ಆತ ಕಿರುಕುಳದಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅಂದೇ ಕದ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರೂ ಈವರೆಗೆ ಆರೋಪಿಯನ್ನು ಪೊಲೀಸರು ಪತ್ತೆಮಾಡಿಲ್ಲ. ಅಲ್ಲದೇ ಅವನ ಕುಟುಂಬದವರನ್ನು ಕೂಡ ವಿಚಾರಣೆ ಮಾಡಿಲ್ಲ. ಪೊಲೀಸ್ ತನಿಖೆಯಲ್ಲಿ ಲೋಪವಿದೆ. ಆಕೆಯ ಮರಣೋತ್ತರ ಪರೀಕ್ಷೆಯಲ್ಲಿ ದೇಹದ ಮೇಲೆ ಲವ್ ಬೈಟ್ ಇದೆ ಎಂದು ತಿಳಿಸಲಾಗಿದೆ. ಇದು ಅಸಭ್ಯವಾಗಿದ್ದು ವೈದ್ಯರ ವಿರುದ್ಧ ಕ್ರಮಕೈಗೊಳ್ಳಬೇಕು. ಅಲ್ಲದೇ ಮೃತ ದೇಹನವನ್ನು ಮರು ಮರಣೋತ್ತರ ಪರೀಕ್ಷೆ ಒಳಪಡಿಸಿ ಇನ್ನಾದರೂ ನ್ಯಾಯ ಒದಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
