ಶಿರಸಿ:
ತಾಲೂಕಿನ ಸಿರ್ಸಿಮಕ್ಕಿ ಸಮೀಪ ಶನಿವಾರ ಬೆಳಿಗ್ಗೆ ಕಾರೊಂದು ಪಲ್ಟಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ 10 ವರ್ಷದ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮೃತ ಬಾಲಕನನ್ನು ಶಿರಸಿ ಕಸ್ತೂರಬಾ ನಗರದ ನಿವಾಸಿ ಅಮಾನುಲ್ಲಾ ಸೌದಾಗರ (10) ಎಂದು ಗುರುತಿಸಲಾಗಿದೆ. ಅಪಘಾತದ ವೇಳೆ ಕಾರಿನಲ್ಲಿ ಒಂದೇ ಕುಟುಂಬದ ಐವರು ಪ್ರಯಾಣಿಸುತ್ತಿದ್ದು, ಎಲ್ಲರೂ ಶಿರಸಿ ಕಸ್ತೂರಬಾ ನಗರದ ನಿವಾಸಿಗಳಾಗಿದ್ದಾರೆ ಈ ಘಟನೆಯಲ್ಲಿ ಲಿಯಾಖತ್ ಮಹಮ್ಮದ್ ಅಲಿ ಸೌದಾಗರ, ಶಿರಿನ್ ಬಾನು ಸೇರಿದಂತೆ ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ಲಿಯಾಖತ್ ಮಹಮ್ಮದ್ ಅಲಿ ಸೌದಾಗರ ಅವರು ಭಟ್ಕಳ ತಾಲೂಕಿನ ಶಿರೂರಿನ ದಾರೂಲ್ ಸುಲ್ ಶಾಲೆಯ ಶಿಕ್ಷಕರಾಗಿದ್ದಾರೆ ಎನ್ನಲಾಗಿದೆ.
ಶಾಲೆಗೆ ರಜೆ ಇದ್ದ ಹಿನ್ನೆಲೆ ಲಿಯಾಖತ್ ಅವರು ತಮ್ಮ ಕುಟುಂಬದವರೊಂದಿಗೆ ಕಾರಿನಲ್ಲಿ ಶಿರಸಿಗೆ ಬರುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತಕ್ಕೆ ಕಾರಣ ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
