ಜೊಯಿಡಾ:
ಅಪಘಾತಗಳ ಸರಣಿಯಿಂದ ಕುಖ್ಯಾತವಾಗಿರುವ ಅನಮೋಡ–ಹೆಮ್ಮೆಡ್ಗಾ ರಸ್ತೆಯಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಅವರ ಪತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಗಳವಾರ ನಡೆದಿದೆ.
ಮೃತ ಮಹಿಳೆಯನ್ನು ಜಾಗೃತಿ ಹರಿದಾಸ್ ಎಂದು ಗುರುತಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಪತಿ ದತ್ತಪ್ರಸಾದ್ ಹರಿದಾಸ್ ಅವರನ್ನು ಗೋವಾದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ದಂಪತಿಗಳು ಗೋವಾದ ಓಲ್ಡ್ ಗೋವಾದಲ್ಲಿ ವಾಸಿಸುತ್ತಿದ್ದರು.
ಪೊಲೀಸರು ನೀಡಿದ ಮಾಹಿತಿಯಂತೆ, ದಂಪತಿಗಳು ಸಂಬಂಧಿಕರ ವಿವಾಹ ಸಮಾರಂಭದಲ್ಲಿ ಭಾಗವಹಿಸಲು ಖಾನಾಪುರಕ್ಕೆ ಆಗಮಿಸಿದ್ದರು. ಕಾರ್ಯಕ್ರಮ ಮುಗಿಸಿ ಕಾರಿನಲ್ಲಿ ಓಲ್ಡ್ ಗೋವಾಕ್ಕೆ ಹಿಂತಿರುಗುತ್ತಿದ್ದ ವೇಳೆ, ಅನಮೋಡ–ಹೆಮ್ಮೆಡ್ಗಾ ರಸ್ತೆಯ ಪಾಲಿ ಸಮೀಪ ಎದುರುಗಡೆಯಿಂದ ಅತಿವೇಗವಾಗಿ ಬರುತ್ತಿದ್ದ ಭಾರೀ ವಾಹನವನ್ನು ತಪ್ಪಿಸಲು ಯತ್ನಿಸಿದಾಗ ಕಾರಿನ ಚಾಲಕನ ನಿಯಂತ್ರಣ ತಪ್ಪಿದೆ. ಪರಿಣಾಮ ಕಾರು ರಸ್ತೆ ಬದಿಗೆ ಜಾರಿ ಮರಕ್ಕೆ ಡಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆಯಿಂದ ಜಾಗೃತಿ ಹರಿದಾಸ್ ಸ್ಥಳದಲ್ಲೇ ಮೃತಪಟ್ಟಿದ್ದು, ಅವರ ಪತಿ ದತ್ತಪ್ರಸಾದ್ ಹರಿದಾಸ್ ಗಂಭೀರ ಗಾಯಗೊಂಡಿದ್ದಾರೆ. ಸ್ಥಳೀಯರು ಹಾಗೂ ವಾಹನ ಚಾಲಕರು ತಕ್ಷಣ ರಕ್ಷಣಾ ಕಾರ್ಯ ಕೈಗೊಂಡು ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
ಮೃತ ಜಾಗೃತಿ ಹರಿದಾಸ್ ಮೂಲತಃ ಜೊಯಿಡಾ ತಾಲ್ಲೂಕಿನ ಕೊನಶೇತ್ ಗ್ರಾಮದವರಾಗಿದ್ದು, ಮಹಾರಾಷ್ಟ್ರದ ಸಾವಂತವಾಡಿಯ ದತ್ತಪ್ರಸಾದ್ ಹರಿದಾಸ್ ಅವರನ್ನು ವಿವಾಹವಾಗಿದ್ದರು. ವಿವಾಹದ ನಂತರ ದಂಪತಿಗಳು ಗೋವಾದ ಓಲ್ಡ್ ಗೋವಾದಲ್ಲಿ ನೆಲೆಸಿದ್ದರು.
ಘಟನೆ ಸಂಬಂಧ ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಅಪಘಾತಕ್ಕೆ ಕಾರಣವಾದ ಅತಿವೇಗ, ರಸ್ತೆ ವಿನ್ಯಾಸ, ತಿರುವುಗಳು ಹಾಗೂ ಭಾರೀ ವಾಹನಗಳ ಸಂಚಾರದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನಿರಂತರ ಅಪಘಾತಗಳಿಂದಾಗಿ ಅನಮೋಡ–ಹೆಮ್ಮೆಡ್ಗಾ ರಸ್ತೆ ಅಪಾಯಕಾರಿ ಮಾರ್ಗವಾಗಿ ಪರಿಣಮಿಸಿದ್ದು, ಈ ಪ್ರದೇಶದಲ್ಲಿ ಸೂಕ್ತ ಸುರಕ್ಷತಾ ಕ್ರಮಗಳು, ಎಚ್ಚರಿಕೆ ಫಲಕಗಳು ಹಾಗೂ ವೇಗ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕೆಂಬ ಸಾರ್ವಜನಿಕರ ಒತ್ತಾಯ ಹೆಚ್ಚಾಗಿದೆ.
