ದಾಂಡೇಲಿ : ದಾಂಡೇಲಿ ಪ್ರೀಮಿಯರ್ ಲೀಗ್ ಸಮಿತಿಯ ಆಶ್ರಯದಡಿ ನಗರದ ಡಿ.ಎಫ್.ಎ ಮೈದಾನದಲ್ಲಿ ಆಯೋಜಿಸಲಾಗಿದ್ದ ದಾಂಡೇಲಿ ಪ್ರೀಮಿಯರ್ ಲೀಗ್ -ಸೀಸನ್ : 5 ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಗೆ ವೈಭವಯುತವಾಗಿ ಚಾಲನೆಯನ್ನು ನೀಡಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಪಂದ್ಯಾವಳಿಯಲ್ಲಿ ಭಾಗವಹಿಸಲಿರುವ ಎಂಟು ತಂಡಗಳ ಆಟಗಾರರನ್ನು ಮೆರವಣಿಗೆಯ ಮೂಲಕ ಗೌರವಪೂರ್ವಕವಾಗಿ ಬರಮಾಡಿಕೊಳ್ಳಲಾಯಿತು.
ತಹಶೀಲ್ದಾರ್ ಶೈಲೇಶ ಪರಮಾನಂದ ಅವರು ದೀಪ ಬೆಳಗಿಸಿ ಡಿಪಿಎಲ್ : 5 ರ ಆವೃತ್ತಿಗೆ ಚಾಲನೆಯನ್ನು ನೀಡಿ ಮಾತನಾಡುತ್ತಾ, ಈ ಪಂದ್ಯಾವಳಿಯನ್ನು ರಾಜ್ಯ, ರಾಷ್ಟ್ರಮಟ್ಟದ ಪಂದ್ಯಾವಳಿಯ ರೀತಿ ಆಯೋಜಿಸಲಾಗಿದೆ. ಪಂದ್ಯಾವಳಿಯ ಆಯೋಜನೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಕ್ರಿಕೆಟ್ ಪಂದ್ಯಾವಳಿ ಆಯೋಜನೆಯಾಗುವ ರೀತಿಯಲ್ಲಿ ಸಂಘಟಿಸಲಾಗಿರುವುದು ಸಂತಸ ತಂದಿದೆ. ದಾಂಡೇಲಿ ಪ್ರೀಮಿಯರ್ ಲೀಗ್ ಸಮಿತಿಯವರು ಕೊಟ್ಟ ಮಾತಿನಂತೆ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸುತ್ತಿರುವುದರ ಜೊತೆಗೆ, ದಾಂಡೇಲಿ ಕ್ರಿಕೆಟ್ ಅಕಾಡೆಮಿಯನ್ನು ಪ್ರಾರಂಭಿಸಿ ಸ್ಥಳೀಯ ಮಕ್ಕಳ ಕ್ರೀಡಾ ಭವಿಷ್ಯದ ಉನ್ನತಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಮಹಿಳೆಯರಿಗೂ ದಾಂಡೇಲಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ನಡೆಯುವಂತಾಗಲಿ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಜೈನ್ ಅವರು ರಾಷ್ಟ್ರ, ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸುವ ರೀತಿಯಲ್ಲಿ ಇಲ್ಲಿ ಮೈದಾನವನ್ನು ಅಣಿಗೊಳಿಸಲಾಗಿದೆ. ಶ್ರಮ, ಹಣ ಹಾಗೂ ಇದಕ್ಕಾಗಿ ತಿಂಗಳುಗಟ್ಟಲೆ ಸಮಯ ಮೀಸಲಿರಿಸಿ ದಾಂಡೇಲಿ ಜನತೆಗೆ ಕ್ರೀಡಾ ರಸದೌತಣವನ್ನು ಉಣಬಡಿಸುತ್ತಿರುವ ದಾಂಡೇಲಿ ಪ್ರೀಮಿಯರ್ ಲೀಗ್ ಸಮಿತಿಯ ಪದಾಧಿಕಾರಿಗಳ ಮತ್ತು ಸದಸ್ಯರ ಸಂಘಟನಾತ್ಮಕವಾದ ಈ ಕಾರ್ಯ ಅತ್ಯಂತ ಸ್ಮರಣೀಯವಾಗಿದೆ. ಇದು ದಾಂಡೇಲಿಯ ಕ್ರಿಕೆಟ್ ಪ್ರತಿಭೆಗಳ ಉಜ್ವಲ ಬದುಕಿಗೆ ಪ್ರೇರಣಾದಾಯಿಯಾಗಿದೆ ಎಂದು ಹೇಳಿ ಪಂದ್ಯಾವಳಿಗೆ ಶುಭವನ್ನು ಕೋರಿದರು.
ಮ್ಯಾಗ್ನೆಟಾ ಐಸ್ ಕ್ರೀಮ್ ಕಂಪನಿ ಮಾಲೀಕ ದಿಗ್ವಿಜಯ ಸಿದ್ನಾಳ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, ದಾಂಡೇಲಿ ಪ್ರೀಮಿಯರ್ ಲೀಗ್ ಸಮಿತಿಯ ಪದಾಧಿಕಾರಿಗಳ ಮತ್ತು ಸದಸ್ಯರ ಕ್ರೀಡಾ ಪ್ರೇಮ ಅತ್ಯಂತ ಅಭಿನಂದನೀಯ. ತಮ್ಮೆಲ್ಲ ವೈಯಕ್ತಿಕ ಕೆಲಸ ಕಾರ್ಯಗಳನ್ನು ಬದಿಗಿಟ್ಟು ದಾಂಡೇಲಿಯ ಜನತೆಗಾಗಿ ಒಂದು ಅತ್ಯದ್ಭುತ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸುವ ಮೂಲಕ ದಾಂಡೇಲಿ ಪ್ರೀಮಿಯರ್ ಲೀಗ್ ತನ್ನ ಸಂಘಟನಾ ಶಕ್ತಿಯನ್ನು ಸಾದರಪಡಿಸಿದೆ ಎಂದರು. ಇಂತಹ ಮೇರು ಪಂದ್ಯಾವಳಿಯಲ್ಲಿ ನಮ್ಮ ಸಂಸ್ಥೆಯು ಸಹಭಾಗಿತ್ವವನ್ನು ಹೊಂದಿರುವುದು ನಮ್ಮ ಸಂಸ್ಥೆಯ ಮೇಲಿನ ಅಭಿಮಾನ ಮತ್ತು ಗೌರವ ಇಮ್ಮಡಿಯಾಗಿದೆ ಎಂದರು.
ನಗರಸಭೆಯ ಪೌರಾಯುಕ್ತ ವಿವೇಕ್ ಬನ್ನೆ ಅವರು ಮಾತನಾಡಿ ಈ ದೇಶದಲ್ಲಿ ಕ್ರಿಕೆಟಿಗೆ ತನ್ನದೇ ಆದ ಶಕ್ತಿಯಿದೆ. ಈ ದೇಶದ ಪ್ರತಿಯೊಬ್ಬರು ಕ್ರಿಕೆಟ್ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಮತ್ತು ಅಭಿಮಾನವನ್ನು ಹೊಂದಿದ್ದಾರೆ. ದಾಂಡೇಲಿಯ ಕ್ರೀಡಾ ಪ್ರತಿಭೆಗಳ ಭವಿಷ್ಯದ ಉನ್ನತಿಗೆ ಈ ಪಂದ್ಯಾವಳಿ ಮುನ್ನುಡಿಯಾಗಲಿ ಎಂದರು.
ಡಿವೈಎಸ್ಪಿ ಶಿವಾನಂದ ಮದರಕಂಡಿ ಮಾತನಾಡಿ ರಾಜ್ಯ, ರಾಷ್ಟ್ರಮಟ್ಟದ ಪಂದ್ಯಾವಳಿಯನ್ನು ಆಯೋಜಿಸಿದ ರೀತಿಯಲ್ಲಿ ಈ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಇದು ದಾಂಡೇಲಿ ನಗರಕ್ಕೆ ಬಹುದೊಡ್ಡ ಹೆಮ್ಮೆ. ಇಂತಹ ಪಂದ್ಯಾವಳಿ ನಿರಂತರವಾಗಿ ನಡೆಯುವಂತಾಗಲಿ ಎಂದರು.
ದಾಂಡೇಲಿ ಪ್ರೀಮಿಯರ್ ಲೀಗ್ ಸಮಿತಿಯ ಅಧ್ಯಕ್ಷರು ಹಾಗೂ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಸದಸ್ಯರಾದ ಅನಿಲ್ ಪಾಟ್ನೇಕರ ಅವರು ಈ ಪಂದ್ಯಾವಳಿ ಐದನೇ ಆವೃತ್ತಿಯವರೆಗೆ ಯಶಸ್ವಿಯಾಗಿ ಸಾಗಿ ಬಂದಿದೆ. ಈ ಅಭೂತಪೂರ್ವ ಯಶಸ್ಸಿಗೆ ದಾಂಡೇಲಿಯ ಮಹಾ ಜನತೆ, ಪ್ರಾಯೋಜಕರು, ದಾನಿಗಳು, ಕ್ರೀಡಾ ಪ್ರೇಮಿಗಳ ತುಂಬು ಹೃದಯದ ಸಹಕಾರವೇ ಕಾರಣವಾಗಿದೆ. ದಾಂಡೇಲಿ ಪ್ರೀಮಿಯರ್ ಲೀಗ್ ಸಮಿತಿಯ ಸರ್ವ ಪದಾಧಿಕಾರಿಗಳು ಮತ್ತು ಸದಸ್ಯರ ಒಗ್ಗಟ್ಟಿನ ಶ್ರಮದ ಫಲವಾಗಿ ವರ್ಷದಿಂದ ವರ್ಷಕ್ಕೆ ದಾಂಡೇಲಿ ಪ್ರೀಮಿಯರ್ ಲೀಗ್ ಹೊಸತನದೊಂದಿಗೆ ಮತ್ತು ಅದ್ದೂರಿಯಾಗಿ ನಡೆಯುತ್ತಿದೆ ಎಂದರು. ಈ ಆವೃತಿಯ ಪಂದ್ಯಗಳಿಗೂ ತುಂಬು ಹೃದಯದ ಸಹಕಾರವನ್ನು ನೀಡಿದ ಸರ್ವರಿಗೂ ದಾಂಡೇಲಿ ಪ್ರೀಮಿಯರ್ ಲೀಗ್ ಸಮಿತಿ ಸದಾ ಕೃತಜ್ಞತೆಗಳನ್ನು ಸಲ್ಲಿಸುತ್ತದೆ ಎಂದರು.
ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ, ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಹಣಕಾಸು ವಿಭಾಗದ ಹಿರಿಯ ಉಪಾಧ್ಯಕ್ಷ ಅಶೋಕ್ ಶರ್ಮಾ, ಪಿಎಸ್ಐ ಅಮೀನ್ ಅತ್ತಾರ, ದಾಂಡೇಲಿ ಪ್ರೀಮಿಯರ್ ಲೀಗ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಕುಲದೀಪ್ ಸಿಂಗ್ ರಜಪೂತ್ ಹಾಗೂ ದಾಂಡೇಲಿ ಪ್ರೀಮಿಯರ್ ಲೀಗ್ ಸಮಿತಿಯ ಪದಾಧಿಕಾರಿಗಳು ಮತ್ತು 8 ಪ್ರಾಂಚೈಸಿ ತಂಡಗಳ ಮಾಲಕರು ಉಪಸ್ಥಿತರಿದ್ದರು.
ದಾಂಡೇಲಿ ಪ್ರೀಮಿಯರ್ ಲೀಗ್ ಸಮಿತಿಯ ಉಪಾಧ್ಯಕ್ಷ ಇಮಾಮ್ ಸರ್ವರ್ ಸ್ವಾಗತಿಸಿದರು. ಕೋಶಾಧಿಕಾರಿ ಸಚಿನ್ ಕಾಮತ್ ವಂದಿಸಿದರು. ಸುರೇಶ ಕಾಮತ್ ಕಾರ್ಯಕ್ರಮವನ್ನು ನಿರೂಪಿಸಿದರು.
ಸಭಾ ಕಾರ್ಯಕ್ರಮ ಮುಗಿದ ಬಳಿಕ ದಾಂಡೇಲಿ ಪ್ರೆಸ್ ವಾರಿಯರ್ಸ್ ಮತ್ತು ದಾಂಡೇಲಿ ಪ್ರೀಮಿಯರ್ ಲೀಗ್ ಕಮಿಟಿ ತಂಡಗಳ ನಡುವೆ ಹೊನಲು ಬೆಳಕಿನಲ್ಲಿ ಪ್ರದರ್ಶನ ಪಂದ್ಯವು ಜರುಗಿತು. ಈ ಪಂದ್ಯಾವಳಿಯಲ್ಲಿ ದಾಂಡೇಲಿ ಪ್ರೆಸ್ ವಾರಿಯರ್ಸ್ ತಂಡ ಗೆಲುವು ಸಾಧಿಸಿತು.
