ಕಾರವಾರ:
ತಾಲೂಕಿನ ಸದಾಶಿವಗಡ ಸಮೀಪದ ಕಾಳಿ ನದಿ ತೀರದಲ್ಲಿ ಶುಕ್ರವಾರ ಬೆಳ್ಳಂಬೆಳಗ್ಗೆ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ವೃದ್ಧನೊಬ್ಬನ ಮೃತದೇಹ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಕಾಳಿ ಬ್ರಿಡ್ಜ್ ಕೆಳಭಾಗದಲ್ಲಿರುವ ಕಲ್ಲು ಬಂಡೆಗಳ ನಡುವೆ ಸುಮಾರು 60 ರಿಂದ 65 ವರ್ಷ ವಯಸ್ಸಿನ ಪುರುಷನ ಶವ ಅಂಗಾತ ಮಲಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸದಾಶಿವಗಡದ ವಾಣಿವಾಡಾ ನಿವಾಸಿ, ಆಟೋ ಚಾಲಕ ಶಾಹರುಖ್ ಶುಕುರ ಮುಲ್ಲಾ (33) ಎಂಬುವವರು ಶುಕ್ರವಾರ ಮುಂಜಾನೆ 8 ಗಂಟೆ ಸುಮಾರಿಗೆ ನದಿ ತೀರದ ಕಡೆ ಹೋದಾಗ ಈ ಭೀಕರ ದೃಶ್ಯ ಕಂಡುಬಂದಿದ್ದು, ತಕ್ಷಣವೇ ಅವರು ಚಿತ್ತಾಕುಲಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಮೃತದೇಹವು ಕೊಳೆತ ಸ್ಥಿತಿಯಲ್ಲಿದ್ದು, ವ್ಯಕ್ತಿಯ ಹೆಸರು ಅಥವಾ ವಿಳಾಸ ಇನ್ನೂ ತಿಳಿದುಬಂದಿಲ್ಲ. ಸುಮಾರು 2-3 ದಿನಗಳ ಹಿಂದೆ ಈ ವೃದ್ಧ ಹೇಗೋ ಕಾಳಿ ನದಿಯ ನೀರಿನಲ್ಲಿ ಬಿದ್ದು ಮುಳುಗಿ ಮೃತಪಟ್ಟಿರಬಹುದು ಮತ್ತು ಶವ ನೀರಿನಲ್ಲಿ ತೇಲಿಕೊಂಡು ಬಂದು ದಡ ಸೇರಿರಬಹುದು ಎಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ.
ಈ ಕುರಿತು ಶಾಹರುಖ್ ಅವರು ನೀಡಿದ ದೂರಿನನ್ವಯ ಚಿತ್ತಾಕುಲಾ ಪೊಲೀಸ್ ಠಾಣೆಯಲ್ಲಿ ಕಲಂ 194ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತನ ವಾರಸುದಾರರ ಪತ್ತೆ ಹಾಗೂ ಸಾವಿನ ನಿಖರ ಕಾರಣ ತಿಳಿಯಲು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
