ದಾಂಡೇಲಿ : ನಗರದ ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಗರ್ಭಿಣಿ ಮಹಿಳೆಗೆ ತುರ್ತು ರಕ್ತದ ಅವಶ್ಯಕತೆ ಇರುವುದರ ಬಗ್ಗೆ ಮಾಹಿತಿಯನ್ನು ತಿಳಿದ ದಾಂಡೇಲಿ ನಗರ ಠಾಣೆಯ ಪಿಎಸ್ಐ ಕಿರಣ್ ಪಾಟೀಲ್ ಅವರು ತಕ್ಷಣವೇ ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆಗೆ ಭೇಟಿ ನೀಡಿ ರಕ್ತ ನೀಡುವ ಮೂಲಕ ಮಾನವೀಯತೆಯನ್ನು ಮೆರೆದ ಘಟನೆ ಗುರುವಾರ ನಡೆದಿದೆ.
ದಾಂಡೇಲಿಯಲ್ಲಿ ಸಮಾಜ ಸೇವಾ ಕ್ಷೇತ್ರದಲ್ಲಿ ತನ್ನದೇ ಆದ ರೀತಿಯ ಸೇವೆಯನ್ನು ಸಲ್ಲಿಸುತ್ತಾ ಬಂದಿರುವ ರಕ್ತದಾನಿ ಹಾಗೂ ರಕ್ತದಾನ ಶಿಬಿರದ ಸಂಘಟಕರಾಗಿರುವ ಸುದೀರ್ ಶೆಟ್ಟಿ ಅವರು ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಗರ್ಭಿಣಿ ಮಹಿಳೆಗೆ ತುರ್ತಾಗಿ ಎ -ಪಾಸಿಟಿವ್ ರಕ್ತದ ಅವಶ್ಯಕತೆ ಇದ್ದು, ದಾನಿಗಳು ಯಾರಾದರೂ ಇದ್ದರೆ ತಕ್ಷಣವೇ ಸ್ಪಂದಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಮನವಿಯನ್ನು ಮಾಡಿದ್ದರು. ಇದನ್ನು ಗಮನಿಸಿದ ಪಿಎಸ್ಐ ಕಿರಣ್ ಪಾಟೀಲ್ ಅವರು ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆಗೆ ಭೇಟಿ ನೀಡಿ, ಎ -ಪಾಸಿಟಿವ್ ರಕ್ತವನ್ನು ನೀಡಿ ನಿಜವಾದ ಮಾನವೀಯತೆಯನ್ನು ಮೆರೆದಿದ್ದಾರೆ.
