ಕಾರವಾರ:
ಹೊನ್ನಾವರ ತಾಲೂಕಿನ ಶ್ರೀಕ್ಷೇತ್ರ ಬಂಗಾರಮಕ್ಕಿಯಲ್ಲಿ ಮಾರ್ಚ್ 27 ರಿಂದ ಏಪ್ರಿಲ್ 2 ರವರೆಗೆ ಸತತ ಏಳು ದಿನಗಳ ಕಾಲ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ವಿಶೇಷವಾಗಿ ಪಶ್ಚಿಮ ಘಟ್ಟ ಸಂರಕ್ಷಣೆ ಹಾಗೂ ವಿವಾದಾತ್ಮಕ ‘ಶರಾವತಿ ಪಂಪ್ಡ್ ಸ್ಟೋರೇಜ್’ ಯೋಜನೆಯ ವಿರುದ್ಧ ಬೃಹತ್ ಜಾಗೃತಿ ಮೂಡಿಸಲು ನಿರ್ಧರಿಸಲಾಗಿದೆ ಎಂದು ಬಂಗಾರಮಕ್ಕಿ ಶ್ರೀ ಮಾರುತಿ ಗುರೂಜಿ ಕಾರವಾರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮಾರ್ಚ್ 27 ರಂದು ಬೆಳಿಗ್ಗೆ 9 ಗಂಟೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮಾಜಿ ಅಧ್ಯಕ್ಷರಾದ ಎ.ಎಸ್. ಕಿರಣ್ ಕುಮಾರ್ ಅವರು ಈ ಸಪ್ತಾಹವನ್ನು ಉದ್ಘಾಟಿಸಲಿದ್ದಾರೆ. ಈ ಏಳು ದಿನಗಳ ಕಾಲ ಸಾಹಿತ್ಯ ಗೋಷ್ಠಿ, ಉದ್ಯೋಗ ಮೇಳ, ಮೀನುಗಾರರ ಸಮಾವೇಶ, ಪಾರಂಪರಿಕ ವೈದ್ಯರ ಸಮ್ಮೇಳನ ಮತ್ತು ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರದಂತಹ ಹತ್ತು-ಹಲವು ಜನಪರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಶರಾವತಿ ಉಳಿಸಿ ಹಾಗೂ ಪಶ್ಚಿಮ ಘಟ್ಟ (ಸಹ್ಯಾದ್ರಿ) ಸಂರಕ್ಷಣಾ ಜಾಗೃತಿ:
ಈ ಬಾರಿಯ ಕಾರ್ಯಕ್ರಮದ ಅತ್ಯಂತ ಪ್ರಮುಖ ಉದ್ದೇಶ ಪಶ್ಚಿಮ ಘಟ್ಟದ ರಕ್ಷಣೆ ಮತ್ತು ಪರಿಸರ ಜಾಗೃತಿ. ಮಾರ್ಚ್ 29 ರಂದು ವಿಶೇಷವಾಗಿ ‘ಸಹ್ಯಾದ್ರಿ ಜ್ಞಾನ ಹಾಗೂ ಸಂರಕ್ಷಣಾ ಸಮಾವೇಶ’ ಹಮ್ಮಿಕೊಳ್ಳಲಾಗಿದೆ. ಜಲತಜ್ಞ ಹಾಗೂ ‘ವಾಟರ್ ಮ್ಯಾನ್ ಆಫ್ ಇಂಡಿಯಾ’ ಖ್ಯಾತಿಯ ರಾಜೇಂದ್ರ ಸಿಂಗ್ ಸೇರಿದಂತೆ 40ಕ್ಕೂ ಹೆಚ್ಚು ಸಾಧು-ಸಂತರು, ವಿಜ್ಞಾನಿಗಳು ಹಾಗೂ ಪರಿಸರ ಚಿಂತಕರು ಇದರಲ್ಲಿ ಭಾಗವಹಿಸಲಿದ್ದು, ಪಶ್ಚಿಮ ಘಟ್ಟದ ಆಗುಹೋಗುಗಳ ಬಗ್ಗೆ ದುಂಡು ಮೇಜಿನ ಸಭೆ ನಡೆಯಲಿದೆ.
“ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಯಾಗುವುದೇ ಆದರೆ, ಅದು ನನ್ನ ಬಲಿಯ ಮೇಲೆಯೇ ಆಗಬೇಕು” ಎಂದು ಗುರೂಜಿ ಅವರು ಯೋಜನೆಯ ವಿರುದ್ಧ ತಮ್ಮ ಕಠಿಣ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಸುಮಾರು 15,000 ಕೋಟಿ ರೂ.ಗಳಿಗೂ ಅಧಿಕ ವೆಚ್ಚದ ಈ ಯೋಜನೆಯಿಂದ ಲಕ್ಷಾಂತರ ಹೆಕ್ಟೇರ್ ಅರಣ್ಯ ನಾಶವಾಗಲಿದ್ದು, 18,000 ಟನ್ ಸ್ಫೋಟಕಗಳನ್ನು ಬಳಸಿ ಭೂಗತ ಸುರಂಗ ಕೊರೆಯುವುದರಿಂದ ಮುಂದಿನ ಪೀಳಿಗೆಗೆ ತುಂಬಲಾರದ ನಷ್ಟವಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಪಶ್ಚಿಮ ಘಟ್ಟದಂತಹ ಸೂಕ್ಷ್ಮ ಪ್ರದೇಶದಲ್ಲಿ ಯಾವುದೇ ಯೋಜನೆ ಮಾಡುವ ಮುನ್ನ ಕಡ್ಡಾಯವಾಗಿ ಅನುಮತಿ ಪಡೆಯಬೇಕೆಂಬ ಯುನೆಸ್ಕೋ ನಿರ್ದೇಶನವನ್ನು ಅವರು ಈ ಸಂದರ್ಭದಲ್ಲಿ ಸ್ಮರಿಸಿದರು.
ಪರಿಸರ ನಾಶಮಾಡುವ ಈ ಯೋಜನೆಗೆ ಪರ್ಯಾಯ ಮಾರ್ಗಗಳಿವೆ. ಗುಜರಾತ್ ಮಾದರಿಯಲ್ಲಿ ಕೇವಲ 14,000 ದಿಂದ 16,000 ಕೋಟಿ ರೂ. ವೆಚ್ಚದಲ್ಲಿ ಕೇವಲ 6 ತಿಂಗಳ ಒಳಗಾಗಿ 2000 ಮೆಗಾವ್ಯಾಟ್ ಸಾಮರ್ಥ್ಯದ ಬ್ಯಾಟರಿ ಆಧಾರಿತ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪಿಸಬಹುದು ಎಂದು ಅವರು ಸಲಹೆ ನೀಡಿದರು. ಅಭಿವೃದ್ಧಿಯ ಹೆಸರಿನಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ. 84 ರಷ್ಟಿದ್ದ ಅರಣ್ಯ ಪ್ರದೇಶವು ಈಗ ಶೇ. 42 ಕ್ಕೆ ಕುಸಿದಿದೆ. ಪರಿಸರ ನಾಶ ಹೀಗೆಯೇ ಮುಂದುವರಿದರೆ ಭವಿಷ್ಯದಲ್ಲಿ ಪೆಟ್ರೋಲ್ ಮತ್ತು ಗ್ಯಾಸ್ ಬಂಕ್ಗಳಂತೆ ಉಸಿರಾಡಲು ‘ಆಕ್ಸಿಜನ್ ಬಂಕ್’ಗಳನ್ನು ಇಟ್ಟುಕೊಳ್ಳುವ ದುಸ್ಥಿತಿ ಬರಲಿದೆ ಎಂದು ಅವರು ಎಚ್ಚರಿಸಿದರು. ಈ ಯೋಜನೆಯನ್ನು ವಿರೋಧಿಸಿ ಈಗಾಗಲೇ ಆನ್ಲೈನ್ ಮೂಲಕ 75,000ಕ್ಕೂ ಹೆಚ್ಚು ಜನರಿಂದ ಸಹಿ ಸಂಗ್ರಹ (ಪಿಟಿಷನ್) ಮಾಡಲಾಗಿದ್ದು, ನ್ಯಾಯಾಲಯ ಹಾಗೂ ಸರ್ಕಾರದ ಮೂಲಕ ಹಕ್ಕೊತ್ತಾಯ ಮಂಡಿಸಲು ವೇದಿಕೆ ಸಿದ್ಧಪಡಿಸಲಾಗಿದೆ.
ಶರಾವತಿ ಆರತಿ ಹಾಗೂ ಇತರೆ ಪ್ರಮುಖ ಕಾರ್ಯಕ್ರಮಗಳು:
ಮಾರ್ಚ್ 28 ರ ಸಂಜೆ 6.15ಕ್ಕೆ ನದಿಯ ದಡದಲ್ಲಿ 10ನೇ ವರ್ಷದ ‘ಶರಾವತಿ ಆರತಿ’ ಕಾರ್ಯಕ್ರಮ ನಡೆಯಲಿದ್ದು, ಅಂಬುತೀರ್ಥದಿಂದ ಹೊನ್ನಾವರದವರೆಗೆ ಸಾರ್ವಜನಿಕರೇ ಖುದ್ದಾಗಿ ನದಿಗೆ ಆರತಿ ಬೆಳಗುವ ಮೂಲಕ ನದಿ ಸಂರಕ್ಷಣೆಯ ಸಂಕಲ್ಪ ಮಾಡಲಿದ್ದಾರೆ. ಅಂದೇ ಕವಿಗಳಾದ ಸುಬ್ಬು ಹೊಲೆಯಾರ್ ಹಾಗೂ ಮಲ್ಲೇಪುರಂ ಜಿ. ವೆಂಕಟೇಶ್ ಅವರ ನೇತೃತ್ವದಲ್ಲಿ ಸಾಹಿತ್ಯ ಗೋಷ್ಠಿ ಜರುಗಲಿದೆ. ಮಾರ್ಚ್ 30 ರಂದು ಯುವಕರಿಗಾಗಿ 60ಕ್ಕೂ ಹೆಚ್ಚು ಪ್ರತಿಷ್ಠಿತ ಹಾಗೂ ಸ್ಟಾರ್ಟ್-ಅಪ್ ಕಂಪನಿಗಳನ್ನೊಳಗೊಂಡ ಬೃಹತ್ ಉದ್ಯೋಗ ಮೇಳ ನಡೆಯಲಿದ್ದು, ಸಂದರ್ಶನದಲ್ಲಿ ಆಯ್ಕೆಯಾದವರಿಗೆ ಅಂದೇ ನೇಮಕಾತಿ ಪತ್ರ ನೀಡಲಾಗುತ್ತದೆ.
ಮಾರ್ಚ್ 31 ರಂದು ಕರಾವಳಿಯ 38 ವಿಧದ ಮೀನುಗಾರ ಸಮುದಾಯಗಳ ಸಮಸ್ಯೆಗಳಿಗೆ ಸ್ಪಂದಿಸಲು ಹಂಪಿ ವಿವಿಯ ಪ್ರೊ. ಶ್ರೀನಿವಾಸ್ ಅವರ ಉಪಸ್ಥಿತಿಯಲ್ಲಿ ‘ಮೀನುಗಾರರ ಸಮಾವೇಶ’ ನಡೆಯಲಿದೆ. ಏಪ್ರಿಲ್ 1 ರಂದು ವಡ್ನಾಳ್ ಜಗದೀಶ್ ಅವರ ಉಪಸ್ಥಿತಿಯಲ್ಲಿ ಪಾರಂಪರಿಕ ವೈದ್ಯರ ಸಮ್ಮೇಳನವನ್ನು ಆಯೋಜಿಸಲಾಗಿದೆ.
ಏಪ್ರಿಲ್ 2 ರಂದು ದೇವರ ಬ್ರಹ್ಮರಥೋತ್ಸವ, ಸೀತಾ ಕಲ್ಯಾಣ ಹಾಗೂ ರಾಮ ಪಟ್ಟಾಭಿಷೇಕದೊಂದಿಗೆ ಸಪ್ತಾಹವು ಸಂಪನ್ನಗೊಳ್ಳಲಿದೆ. ಸಮಾರೋಪ ಸಮಾರಂಭದಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಸೀತಾರಾಮ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ. ಅಂದು ದಾವಣಗೆರೆಯ ವೈದ್ಯಕೀಯ ಮಹಾವಿದ್ಯಾಲಯದ ಸಹಯೋಗದಲ್ಲಿ 80ಕ್ಕೂ ಹೆಚ್ಚು ತಜ್ಞ ವೈದ್ಯರಿಂದ ಬೃಹತ್ ಆರೋಗ್ಯ ಶಿಬಿರ ಆಯೋಜಿಸಲಾಗಿದ್ದು, 32 ರೀತಿಯ ಕಾಯಿಲೆಗಳಿಗೆ ತಪಾಸಣೆ, ಉಚಿತ ಶಸ್ತ್ರಚಿಕಿತ್ಸೆ ಹಾಗೂ ಸುಮಾರು 20 ಲಕ್ಷ ರೂ. ಮೌಲ್ಯದ ಉಚಿತ ಔಷಧೋಪಚಾರವನ್ನು ಸಾರ್ವಜನಿಕರಿಗೆ ನೀಡಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ವಿವರಿಸಲಾಯಿತು.
