ಪ್ರತಿಷ್ಠಿತ ಹಣಕಾಸು ಸಂಸ್ಥೆಯಲ್ಲಿ ನಡೆದ ಪ್ರಕರಣ। ಪದಾಧಿಕಾರಿಗಳ ವಿರುದ್ಧ ದೂರು ದಾಖಲು
ದಾಂಡೇಲಿ: ಉತ್ತರ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಹಣಕಾಸು ಸಂಸ್ಥೆಗಳಲ್ಲಿ ಒಂದಾದ ದಾಂಡೇಲಿಯ ತಾಮೀರ ಕೋ-ಆಪರೇಟಿವ್ ಸೊಸೈಟಿಯಲ್ಲಿ ಸುಮಾರು 5.09 ಕೋಟಿ ರೂಪಾಯಿಗಳ ಬೃಹತ್ ಹಣ ದುರುಪಯೋಗ ಮತ್ತು ವಂಚನೆ ನಡೆದಿರುವುದು ಬೆಳಕಿಗೆ ಬಂದಿದ್ದು, ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸೊಸೈಟಿಯ ದಾಂಡೇಲಿ ಶಾಖೆಯಲ್ಲಿ 17-03-2021 ರಿಂದ 02-01-2024 ರ ಅವಧಿಯಲ್ಲಿ ಆರೋಪಿತರು ವ್ಯವಸ್ಥಿತವಾಗಿ ಸಂಚು ರೂಪಿಸಿ ಈ ವಂಚನೆ ಎಸಗಿದ್ದಾರೆ ಎನ್ನಲಾಗಿದೆ. ಸಾಲಗಾರರಿಂದ ಸರಿಯಾದ ಭದ್ರತಾ ಬಾಂಡ್ ಪಡೆಯದೆ ಹಾಗೂ ಕೆವೈಸಿ ದಾಖಲೆಗಳಿಲ್ಲದೆ, ಸುಳ್ಳು ಸಾಲಗಾರರ ಹೆಸರಿನಲ್ಲಿ ನಕಲಿ ಬಂಗಾರವನ್ನು ಅಡವಿಟ್ಟು ಸಾಲ ಮಂಜೂರು ಮಾಡಲಾಗಿದೆ. ಒಟ್ಟು 208 ಖಾತೆಗಳ ಮೂಲಕ ರೂ. 5,09,09,450 ಹಣವನ್ನು ಬಿಡುಗಡೆಗೊಳಿಸಿ, ಅದನ್ನು ಪದಾಧಿಕಾರಿಗಳು ತಮ್ಮ ಸ್ವಂತಕ್ಕೆ ಬಳಸಿಕೊಂಡು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಈ ಸೊಸೈಟಿಯು ಸಾವಿರಾರು ಸದಸ್ಯರನ್ನು ಹೊಂದಿದ್ದು, ದುರುಪಯೋಗವಾದ ಹಣವು ಸಾರ್ವಜನಿಕರದ್ದಾಗಿದೆ. 2023-24ನೇ ಸಾಲಿನ ಲೆಕ್ಕಪರಿಶೋಧನಾ ವರದಿಯು ಈ ಬೃಹತ್ ಹಗರಣವನ್ನು ಬಯಲಿಗೆಳೆದಿದೆ.
ಸಂಘದ ಆಡಳಿತ ಮಂಡಳಿ ಅಸ್ತಿತ್ವದಲ್ಲಿ ಇಲ್ಲದ ಕಾರಣ, ಆಡಳಿತಾಧಿಕಾರಿಗಳು ಹಾಗೂ ಕಾರವಾರದ ಉಪನಿಬಂಧಕರೊಂದಿಗೆ ಚರ್ಚಿಸಿ ನಿರ್ಣಯ ಕೈಗೊಳ್ಳಬೇಕಾದ ಹಿನ್ನೆಲೆಯಲ್ಲಿ ದೂರು ದಾಖಲಿಸಲು ವಿಳಂಬವಾಗಿದೆ ಎಂದು ದೂರು ನೀಡಿರುವ ಶಿರಸಿಯ ತಾಮೀರ ಕೋ-ಓಪರೇಟಿವ ಕ್ರೆಡಿಟ್ ಸೊಸೈಟಿ ಲಿ, ಅಂಕೋಲಾ ಇದರ ಜನರಲ್ ಮ್ಯಾನೇಜರ್ ಮೊಹ್ಮದ ಅಜೀಮ್ ರುಕ್ಷುದ್ದೀನ್ ಶೇಖ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಸ್ತುತ ಪೊಲೀಸ್ ಇಲಾಖೆಯು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಸಾವಿರಾರು ಸದಸ್ಯರ ಹಿತದೃಷ್ಟಿಯಿಂದ ಆರೋಪಿತರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಸಂಘದ ಪರವಾಗಿ ಒತ್ತಾಯಿಸಲಾಗಿದೆ. ದಾಂಡೇಲಿ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
