ಡಾ.ಆರ್.ಕೆ.ಕುಲಕರ್ಣಿಯವರ ಆರೋಗ್ಯ ಸೇವೆ ಸದಾ ಸ್ಮರಣೀಯ : ಅಶುತೋಷ್ ಕುಮಾರ್ ರಾಯ್
ದಾಂಡೇಲಿ : ಶಿಕ್ಷಣ ಮತ್ತು ಸೇವೆ ಹಾಗೂ ವೃತ್ತಿ ಬದುಕಿಗೆ ವ್ಯಕ್ತಿತ್ವವೇ ಭೂಷಣ. ಇಂತಹ ಜನಪರ, ಬಡವರ ಪರ ಸದಾ ಕಾಳಜಿಯನ್ನು ಇಟ್ಟುಕೊಂಡು ಪವಿತ್ರ ಮನಸ್ಸಿನಿಂದ ಆರೋಗ್ಯ ಸೇವೆಯನ್ನು ನೀಡಿದ ಡಾ.ಆರ್.ಕೆ.ಕುಲಕರ್ಣಿಯವರು ದಾಂಡೇಲಿಯಲ್ಲಿ ನೀಡಿದ ಸುದೀರ್ಘ 45 ವರ್ಷಗಳ ಆರೋಗ್ಯ ಸೇವೆ ಸದಾ ಸ್ಮರಣೀಯವಾಗಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಅಶುತೋಷ್ ಕುಮಾರ್ ರಾಯ್ ಹೇಳಿದರು.
ಅವರು ಕಳೆದ 45 ವರ್ಷಗಳಿಂದ ದಾಂಡೇಲಿಯಲ್ಲಿ ಅತ್ಯಂತ ಪ್ರಾಂಜಲ ಗುಣಮನಸ್ಸಿನಿಂದ ಆರೋಗ್ಯ ಸೇವೆಯನ್ನು ನೀಡಿ ಇದೀಗ ಧಾರವಾಡಕ್ಕೆ ಸ್ಥಳಾಂತರಗೊಳ್ಳುತ್ತಿರುವ ದಾಂಡೇಲಿಯ ಹಿರಿಯ ವೈದ್ಯರು ಹಾಗೂ ಬಡವರ ಪಾಲಿನ ಆಪತ್ಬಾಂಧವರಾದ ಡಾ.ಆರ್.ಕೆ.ಕುಲಕರ್ಣಿಯವರು ವಯಸ್ಸಿನ ಕಾರಣದಿಂದಾಗಿ ಧಾರವಾಡಕ್ಕೆ ಸ್ಥಳಾಂತರ ಗೊಳ್ಳುತ್ತಿರುವ ಹಿನ್ನಲೆಯಲ್ಲಿ ದಾಂಡೇಲಿಗೆ ಸಲ್ಲಿಸಿದ ಆರೋಗ್ಯ ಸೇವೆಯನ್ನು ವಿಶೇಷವಾಗಿ ಸ್ಮರಿಸಿಕೊಂಡು ದಾಂಡೇಲಿಯ ರೋಟರಿ ಕ್ಲಬ್ ವತಿಯಿಂದ ಡಾ.ಆರ್.ಕೆ.ಕುಲಕರ್ಣಿಯವರನ್ನು ಸನ್ಮಾನಿಸಿ ಮಾತನಾಡುತ್ತಿದ್ದರು. ರೋಗಿಗಳನ್ನು ಅತ್ಯಂತ ವಿಶಿಷ್ಟವಾಗಿ ಹಾಗೂ ಪ್ರೀತಿ, ಆತ್ಮೀಯತೆಯಿಂದ ಕಾಣುವ ಮೂಲಕ ರೋಗಿಗಳು ಆರೋಗ್ಯ ನೆಮ್ಮದಿಯನ್ನು ಕಾಣುವಂತಾಗಲು ಅವಿರತ, ಅನವರತ ಸಲ್ಲಿಸಿದ ಸೇವೆ ವಿಶೇಷವಾಗಿದೆ. ಬಡವರು ಹಾಗೂ ದುರ್ಬಲ ಜನರಿಗೆ ನಿಸ್ವಾರ್ಥವಾಗಿ ಆರೋಗ್ಯ ಸೇವೆಯನ್ನು ನೀಡುವ ಮೂಲಕ ಸಮಾಜಮುಖಿಯಾಗಿ ಗುರುತಿಸಿಕೊಂಡಿದ್ದ ಡಾ.ಆರ್.ಕೆ.ಕುಲಕರ್ಣಿಯವರ ಆರೋಗ್ಯ ಸೇವೆ ಸದಾ ಸ್ಮರಣೀಯವಾಗಿದೆ. ಇದೀಗ ಅವರು ಧಾರವಾಡಕ್ಕೆ ಸ್ಥಳಾಂತರಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಅವರ ಸೇವೆಯನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ಈ ಮೂಲಕ ರೋಟರಿ ಕ್ಲಬ್ ಮಾಡುತಿದೆ ಎಂದು ಹೇಳಿ, ಸತ್ಪುರುಷ ಶ್ರೀ ದಾಂಡೇಲಪ್ಪ ಡಾ.ಆರ್.ಕೆ.ಕುಲಕರ್ಣಿಯವರಿಗೆ ಸದಾ ಆಯುರಾರೋಗ್ಯವನ್ನು ಅನುಗ್ರಹಿಸಲಿ ಎಂದು ಪ್ರಾರ್ಥಿಸಿದರು.
ರೋಟರಿ ಕ್ಲಬ್ ವತಿಯಿಂದ ಡಾ.ಆರ್.ಕೆ.ಕುಲಕರ್ಣಿ ದಂಪತಿಗಳನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯ್ತು.
ಈ ಸಂದರ್ಭದಲ್ಲಿ ಮಾತನಾಡಿದ ಡಾ.ಆರ್.ಕೆ.ಕುಲಕರ್ಣಿಯವರು ಮನುಷ್ಯ ಜೀವನ ಅತ್ಯಂತ ಸರ್ವ ಶ್ರೇಷ್ಠವಾದ ಜೀವನ. ಮಾನವರಾಗಿ ಹುಟ್ಟಿದ ಮೇಲೆ ನಾವು ಸಮಾಜಕ್ಕೆ ನಮ್ಮಿಂದ ಕೊಡುಗೆಗಳೇನು ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಬಡವರಿಗೆ ಹಾಗೂ ದುರ್ಬಲರಿಗೆ ನೀಡಿದ ನಿಸ್ವಾರ್ಥ ಮನಸ್ಸಿನಿಂದ ಆರೋಗ್ಯ ಸೇವೆಯನ್ನು ನೀಡಿದಾಗ ನಿಜಕ್ಕೂ ನಮ್ಮ ವೃತ್ತಿ ಬದುಕಿಗೆ ಅದು ಸದಾ ಸ್ಪೂರ್ತಿಯಾಗಲಿದೆ. ಹುಟ್ಟಿದ ಮನುಷ್ಯ ಪ್ರತಿಯೊಬ್ಬರೂ ಬದುಕುತ್ತಾರೆ. ನಾವು ನಮ್ಮ ನಮ್ಮ ಬದುಕಿನ ಜೊತೆ ಜೊತೆಗೆ ಸಂಕಷ್ಟದಲ್ಲಿರುವವರ ಸಮಸ್ಯೆಗಳಿಗೆ ಸ್ಪಂದಿಸುವುದೇ ನಿಜವಾದ ಸಮಾಜಮುಖಿ ಬದುಕಾಗಲು ಸಾಧ್ಯವಿದೆ. ನಾನು ನನ್ನ ಕರ್ತವ್ಯವನ್ನು ಮಾಡಿದ್ದೇನೆ. ನನ್ನ ಕರ್ತವ್ಯವನ್ನು ಸೇವೆ ಎಂದು ಪರಿಗಣಿಸಿ ರೋಟರಿ ಕ್ಲಬ್ ನನ್ನ ಮೇಲೆ ವಿಶೇಷವಾದ ಅಭಿಮಾನವಿಟ್ಟು ಸನ್ಮಾನಿಸಿರುವುದಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಪ್ರಧಾನ ಕಾರ್ಯದರ್ಶಿ ಮಿಥುನ್ ನಾಯಕ, ಖಜಾಂಚಿ ಲಿಯೋ ಪಿಂಟೋ, ರೋಟರಿ ಪ್ರಮುಖರಾದ ಆರ್.ಪಿ.ನಾಯ್ಕ, ಪ್ರಕಾಶ ಶೆಟ್ಟಿ, ಪ್ರಕಾಶ ಕಣ್ವೆಹಳ್ಳಿ, ರಾಹುಲ್ ಬಾವಾಜಿ, ನಾಗೇಶ ನಾಯ್ಕವಾಡಿ, ಡಾ.ಜ್ಞಾನದೀಪ ಗಾಂವಕರ ಉಪಸ್ಥಿತರಿದ್ದು ಡಾ.ಆರ್.ಕೆ.ಕುಲಕರ್ಣಿಯವರ ಆರೋಗ್ಯ, ಸಾಮಾಜಿಕ, ಮತ್ತು ಧಾರ್ಮಿಕ ಸೇವೆಯನ್ನು ವಿಶೇಷವಾಗಿ ಕೊಂಡಾಡಿದರು.
