ದಾಂಡೇಲಿ:
ಇಲ್ಲಿನ ಅಜಗಾಂವ್ ಗ್ರಾಮದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಪಿಯುಸಿ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಈ ಕುರಿತು ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಮೃತರನ್ನು ಜಾನ್ವಿಯಾನ್ನಿ (17), ಜೇಮ್ಸ್ ಡಿಸೋಜಾ ಅವರ ಪುತ್ರ, ಹಳಿಯಾಳದ ಕಾನ್ವೆಂಟ್ ರಸ್ತೆಯ ನಿವಾಸಿ ಎಂದು ಗುರುತಿಸಲಾಗಿದೆ. ಇವರು ಪಿಯುಸಿ ವಿದ್ಯಾರ್ಥಿಯಾಗಿದ್ದರು.
ಮೃತರ ತಾಯಿ ಮೆರಿಯಾನ್ ಎಮ್. ಲೂಯೀಸ್ (47) ಅವರು ನೀಡಿದ ದೂರಿನ ಪ್ರಕಾರ, ಏಪ್ರಿಲ್ 4ರಂದು ರಾತ್ರಿ ಕುಟುಂಬ ಸಮೇತ ಹಳಿಯಾಳದ ಸೇಂಟ್ ಮಿಲಾಗ್ರೀಸ್ ಚರ್ಚ್ನಲ್ಲಿ ಈಸ್ಟರ್ ಹಬ್ಬದ ಆಚರಣೆಯಲ್ಲಿ ಭಾಗವಹಿಸಿದ್ದರು. ಇದೇ ವೇಳೆ ಏಪ್ರಿಲ್ 5ರಂದು ಬೆಳಗಿನ ಜಾವ ಸುಮಾರು 2 ಗಂಟೆ ಸುಮಾರಿಗೆ ಜಾನ್ವಿಯಾನ್ನಿ ಮನೆಯ ಮೋಟಾರ್ ಸೈಕಲ್ (ಕೆಎ-27/ಇಎ-8751) ತೆಗೆದುಕೊಂಡು ಹೊರಟಿದ್ದಾನೆ.
ಬೆಳಿಗ್ಗೆ 9.30ಕ್ಕೆ ಸಂಬಂಧಿಕರಿಂದ ಕರೆ ಬಂದಿದ್ದು, ಅಜಗಾಂವ್ ಬಳಿ ಅಪಘಾತ ಸಂಭವಿಸಿರುವುದಾಗಿ ತಿಳಿದು ಬಂದಿದೆ. ತಕ್ಷಣ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಹರಿದಾಸ ಶಿಂಧೆ ಅವರ ಕಬ್ಬಿನ ಗದ್ದೆಯಲ್ಲಿ ಬೈಕ್ ಅಪಘಾತಗೊಂಡು, ಜಾನ್ವಿಯಾನ್ನಿ ತಲೆಗೆ ತೀವ್ರ ಗಾಯಗೊಂಡು ಮೃತಪಟ್ಟಿರುವುದು ಪತ್ತೆಯಾಗಿದೆ.
ಪ್ರಾಥಮಿಕ ತನಿಖೆಯಲ್ಲಿ, ಹಳಿಯಾಳದಿಂದ ದಾಂಡೇಲಿ ಕಡೆಗೆ ಅತಿವೇಗ ಹಾಗೂ ನಿರ್ಲಕ್ಷ್ಯ ಚಾಲನೆಯಿಂದ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಬ್ಬಿನ ಗದ್ದೆಗೆ ನುಗ್ಗಿ ಅಪಘಾತ ಸಂಭವಿಸಿರುವುದು ತಿಳಿದುಬಂದಿದೆ.
ಈ ಸಂಬಂಧ ಬಿಎನ್ಎಸ್ 2023ರ ಕಲಂ 281 ಹಾಗೂ 106(1) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
