ಹೊನ್ನಾವರ:
ತಾಲ್ಲೂಕಿನ ಗುಣವಂತೆಯ ಮುಗಳಿ ಗ್ರಾಮದಲ್ಲಿ ಚಿರತೆ ಒಂದು ಮನೆಯ ಬಾವಿಗೆ ಬಿದ್ದಿರುವ ಘಟನೆ ಮಂಗಳವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಮುಗಳಿ ಗ್ರಾಮದ ವಾಸು ಈಶ್ವರ ನಾಯ್ಕ ಅವರ ಮನೆಯ ಬಾವಿಯಲ್ಲಿ ಈ ಘಟನೆ ಸಂಭವಿಸಿದೆ. ಇಂದು ಬೆಳಗಿನ ಜಾವ ಮನೆಯವರು ಬಾವಿಯಿಂದ ನೀರು ತೆಗೆದುಕೊಳ್ಳಲು ಪಂಪ್ ಆನ್ ಮಾಡಿದಾಗ ನೀರು ಬರದೆ ಇದ್ದುದನ್ನು ಗಮನಿಸಿದ್ದಾರೆ. ಇದರಿಂದ ಅನುಮಾನಗೊಂಡ ಅವರು ಬಾವಿಯ ಬಳಿ ಹೋಗಿ ನೋಡಿದಾಗ, ಬಾವಿಯೊಳಗೆ ಚಿರತೆ ಇರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ.
ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ಚಿರತೆಯನ್ನು ಸುರಕ್ಷಿತವಾಗಿ ಹೊರತೆಗೆದು ಕಾಡಿಗೆ ಬಿಡುವ ಕಾರ್ಯ ಮುಂದುವರಿದಿದೆ.
ಘಟನೆ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿಗಳು ಜನರಿಗೆ ಎಚ್ಚರಿಕೆ ಸೂಚನೆಗಳನ್ನು ನೀಡುತ್ತಿದ್ದಾರೆ.
