ಕಾರವಾರ:
ಬೇಸಿಗೆಯ ಹಗೆ ಹೆಚ್ಚಾಗಿದ್ದು ಸಾರ್ವಜನಿಕರು ರಸ್ತೆ ಬದಿಯ ಮರಗಳ ನೆರಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಆದರೆ ಕಾರವಾರದಲ್ಲಿ ಇಂತಹ ಮರಗಳ ರೆಂಬೆಗಳನ್ನು ಕತ್ತರಿಸಲಾಗುತ್ತಿದೆ. ಏಕೆಂದರೆ ಕೈಗಾಕ್ಕೆ ಬೃಹತ್ ಗಾತ್ರದ ಯಂತ್ರೋಪಕರಣಗಳನ್ನು ಸಾಗಿಸಲು ಅನುಕೂಲವಾಗುವ ದೃಷ್ಟಿಯಿಂದ ನಗರದ ಸಿವಿಲ್ ಕೊರ್ಟ್ ರಸ್ತೆಯಲ್ಲಿನ ಬೃಹತ್ ಮರಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ಈ ರಸ್ತೆಯಲ್ಲಿ ಸಂಚರಿಸುವ ಕೈಗಾ ಅಣು ವಿದ್ಯುತ್ ಘಟಕಕ್ಕೆ ಸಂಬಂಧಿಸಿದ ಭಾರೀ ಲಾರಿಗಳ ಸಂಚಾರಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಭಾರೀ ಗಾತ್ರದ ಯಂತ್ರ ಹೊತ್ತು ತಂದ ಲಾರಿ ಈಗಾಗಲೇ ಕಾರವಾರ ನಗರದಿಂದ 5 km ಹಿಂದೆ ರಾಷ್ಟ್ರೀಯ ಹೆದ್ದಾರಿ ಪಕ್ಕ ನಿಂತಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಯಾವುದೇ ಅಡೆತಡೆ ಇಲ್ಲದೇ ಬೃಹತ್ ಯಂತ್ರ ಹೊತ್ತುಬಂದ ಲಾರಿಗೆ ಕಾರವಾರ ನಗರ ಪ್ರದೇಶದಿಂದ ಕೈಗಾ ತಲುಪುವವರೆಗೂ ರಸ್ತೆ ಅಕ್ಕ ಅಕ್ಕದ ಮರಗಳಿರುವುದರಿಂದ ಸುಗಮ ಸಂಚಾರಕ್ಕೆ ಅಡೆತಡೆಯಾಗಿದೆ. ಆದರೆ ಬೇಸಿಗೆಯಲ್ಲಿ ಈ ಮರಗಳ ಕಟಾವು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಮನೆ ಮಾಡಿದೆ.
ಭಾರೀ ವಾಹನ ಸಂಚಾರದಿಂದ ಕಾರವಾರ ನಗರದಿಂದ ಕೈಗಾ ವರಗಿನ ರಸ್ತೆಗಳು ಹಾಗೂ ಸಣ್ಣ ಸಣ್ಣ ಸೇತುವೆಗಳು ಬೇಗ ಹಾಳಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕಾರವಾರ–ಕೈಗಾ ಮಾರ್ಗವನ್ನು ಅಗಲಗೊಳಿಸುವ ಅಗತ್ಯತೆಯ ಕುರಿತು ಸಾರ್ವಜನಿಕರಿಂದ ಹಾಗೂ ವಾಹನ ಸವಾರರಿಂದ ಒತ್ತಾಯಗಳು ಹೆಚ್ಚಾಗಿವೆ.
