ಬೆಂಗಳೂರು : ಪರಪ್ಪನ ಅಗ್ರಹಾರ ಜೈಲಿನಿಂದ ಪ್ರಜ್ವಲ್ ರೇವಣ್ಣ ಅವರನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ಸ್ಥಳಾಂತರಿಸುವ ಪ್ರಕ್ರಿಯೆಯಲ್ಲಿ ಭಾರೀ ಹೈಡ್ರಾಮಾ ನಡೆದಿದೆ. ಶುಕ್ರವಾರವೇ ಪ್ರಜ್ವಲ್ ಅವರನ್ನು ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲು ಭಾರಿ ಸಿದ್ಧತೆ ನಡೆದಿತ್ತು. ಅದರಂತೆ, ಸಿ.ಎ.ಆರ್ (CAR) ಪೊಲೀಸರು ಪ್ರಜ್ವಲ್ ಅವರನ್ನು ಕರೆದುಕೊಂಡು ಬೆಂಗಳೂರಿನಿಂದ ಹೊರಟು ಶಿರಾವರೆಗೆ ಪ್ರಯಾಣಿಸಿದ್ದರು. ಆದರೆ, ಈ ಸ್ಥಳಾಂತರದ ಕಹಾನಿಯಲ್ಲಿ ಯಾರು ಊಹಿಸದ ಅನಿರೀಕ್ಷಿತ ಟ್ವಿಸ್ಟ್ ಎದುರಾಗಿದೆ.
ಪ್ರಭಾವಿ ನಾಯಕನ ಕರೆ, ಶಿರಾದಿಂದಲೇ ಯು-ಟರ್ನ್!
ಪೊಲೀಸರು ಪ್ರಜ್ವಲ್ ರೇವಣ್ಣ ಅವರನ್ನು ಶಿರಾವರೆಗೆ ಕರೆದೊಯ್ಯುತ್ತಿದ್ದಾಗಲೇ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರಿಗೆ ರಾಜ್ಯದ ಪ್ರಭಾವಿ ನಾಯಕರೊಬ್ಬರಿಂದ ದಿಢೀರ್ ದೂರವಾಣಿ ಕರೆ ಬಂದಿದೆ. ‘ಕೂಡಲೇ ಪ್ರಜ್ವಲ್ನನ್ನು ಬೆಂಗಳೂರಿಗೆ ವಾಪಸ್ ಕರೆಸಿಕೊಳ್ಳಿ’ ಎಂದು ಆ ಪ್ರಭಾವಿ ವ್ಯಕ್ತಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಇದಾದ ಬೆನ್ನಲ್ಲೇ, ಶಿಫ್ಟ್ ಮಾಡಲು ಆದೇಶ ನೀಡಿದ್ದ ಅದೇ ಹಿರಿಯ ಅಧಿಕಾರಿ ಸಿ.ಎ.ಆರ್ ಪೊಲೀಸರಿಗೆ ಕರೆ ಮಾಡಿ, ಅರ್ಧ ದಾರಿಯಿಂದಲೇ ಪ್ರಜ್ವಲ್ ಅವರನ್ನು ವಾಪಸ್ ಕರೆತರುವಂತೆ ಆದೇಶಿಸಿದ್ದಾರೆ.
ವಿಪಕ್ಷಗಳ ಟೀಕೆಯ ಭೀತಿ, ರಾಜಕೀಯ ಲೆಕ್ಕಾಚಾರ
ಈ ದಿಢೀರ್ ಬೆಳವಣಿಗೆಯ ಹಿಂದಿನ ಅಸಲಿ ಕಾರಣ ರಾಜಕೀಯ ಲೆಕ್ಕಾಚಾರ ಎನ್ನಲಾಗಿದೆ. ‘ಈ ಸಮಯದಲ್ಲಿ ಪ್ರಜ್ವಲ್ ಅವರನ್ನು ಶಿಫ್ಟ್ ಮಾಡಿದರೆ ಅನಗತ್ಯ ಸಮಸ್ಯೆ ಎದುರಾಗುತ್ತದೆ. ವಿಪಕ್ಷಗಳಿಗೆ ನಾವೇ ಆಹಾರ ಒದಗಿಸಿದಂತಾಗುತ್ತದೆ. ರಾಜಕೀಯ ಒತ್ತಡಕ್ಕೆ ಮಣಿದು ಶಿಫ್ಟ್ ಮಾಡಲಾಗಿದೆ ಎಂಬ ಆರೋಪ ಕೇಳಿಬರುತ್ತದೆ’ ಎಂದು ಆ ಪ್ರಭಾವಿ ನಾಯಕ ಹಿರಿಯ ಅಧಿಕಾರಿಗೆ ವಿವರಿಸಿದ್ದಾರೆ ಎನ್ನಲಾಗಿದೆ.
ಹೀಗಾಗಿಯೇ ರಾಜಕೀಯ ಮುಜುಗರ ಹಾಗೂ ವಿಪಕ್ಷಗಳ ಟೀಕೆಯನ್ನು ತಪ್ಪಿಸುವ ಉದ್ದೇಶದಿಂದಲೇ ಶಿರಾದಿಂದಲೇ ಪ್ರಜ್ವಲ್ ಅವರನ್ನು ವಾಪಸ್ ಕರೆತರಲಾಗಿದೆ ಎಂಬ ಸ್ಫೋಟಕ ಮಾಹಿತಿ ಇದೀಗ ಬಹಿರಂಗವಾಗಿದೆ.
